ಸಿದ್ದಾಪುರ, ಆ. 22: ನದಿಪಾತ್ರದ ನಿವಾಸಿಗಳು ನದಿ ತೀರವನ್ನು ತೊರೆಯಬೇಕೆಂದು ಶಾಸಕ ಕೆ.ಜಿ. ಬೋಪಯ್ಯ ಸಲಹೆ ನೀಡಿದರು. ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಾದ ಕುಟುಂಬಗಳಿಗೆ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನದಿ ಪಾತ್ರದಲ್ಲಿ ವರ್ಷಂಪ್ರತಿ ಮಳೆಗಾಲದಲ್ಲಿ ಪ್ರವಾಹ ಏರಿಕೆಯಾಗಿ ಗಂಭೀರ ಸಮಸ್ಯೆಗಳು ಎದುರಾಗುತ್ತಿದೆ ಈ ಹಿನ್ನೆಲೆಯಲ್ಲಿ ನದಿ ದಡದ ನಿವಾಸಿಗಳು ನದಿ ತೀರವನ್ನು ತೊರೆಯಬೇಕೆಂದು ತಿಳಿಸಿದರು ಮನೆ ಕಳೆದುಕೊಂಡ ಕುಟುಂಬಗಳಿಗೆ ಸರ್ಕಾರದ ವತಿಯಿಂದ ಶಾಶ್ವತ ಸೂರು ಕೊಡುವ ನಿಟ್ಟಿನಲ್ಲಿ ಸರ್ಕಾರಿ ಜಾಗಗಳು ಸಿಗದಿದ್ದಲ್ಲಿ ಖಾಸಗಿ ಜಾಗವನ್ನು ಖರೀದಿಸಿ ಶಾಶ್ವತ ಸೂರು ಒದಗಿಸಲಾಗುವದೆಂದು ಭರವಸೆ ನೀಡಿದರು. ಕೊಂಡಂಗೇರಿಯಲ್ಲಿ 266 ಹಾಗೂ ಕರಡಿಗೋಡಿನಲ್ಲಿ 91 ಕುಟುಂಬಗಳಿಗೆ ಪರಿಹಾರದ ಚೆಕ್ಕನ್ನು ವಿತರಿಸಲಾಯಿತು. ಈ ಸಂದರ್ಭ ಜಿಲ್ಲಾ ಪಂಚಾಯತ್ ಸದಸ್ಯ ಶಶಿ ಸುಬ್ರಮಣಿ ಗ್ರಾಮಲೆಕ್ಕಿಗರಾದ ಓಮಪ್ಪ ಬಣಕಾರ್ ಮುತ್ತಪ್ಪ, ಅನೀಸ್ ಹಾಗೂ ಗ್ರಾಮ ಪಂಚಾಯಿತಿ ಪಿ.ಡಿ.ಓ.ಗಳು ಹಾಗೂ ಸದಸ್ಯರುಗಳು ಹಾಜರಿದ್ದರು.