ವೀರಾಜಪೇಟೆ, ಆ. 21: ಕೊಡಗಿನಲ್ಲಿ ಜಳಪ್ರಳಯ ಸಂಭವಿಸಿದ್ದು, ಕೊಡಗಿಗೆ ಆಗಮಿಸಿ ರಕ್ಷಣಾ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳದ ತುಕಡಿಯೊಂದಿಗೆ ಸ್ಥಳೀಯ ಉದ್ಯಮಿ ಕುಟುಂಬ ರಕ್ಷಾ ಬಂಧನ ಆಚರಿಸಿಕೊಂಡಿತು.
ವೀರಾಜಪೇಟೆ ನಗರದ ಮಹಿಳಾ ಸಮಾಜದಲ್ಲಿ ತಂಗಿದ್ದ ಎನ್.ಡಿ.ಅರ್.ಅಫ್. ತುಕಡಿಯ ಸಿಬ್ಬಂದಿಗಳಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನ ಕಾರ್ಯಕ್ರಮ ಆಚರಿಸಿಕೊಳ್ಳಲಾಯಿತು. ನಗರದ ಮುಖ್ಯ ರಸ್ತೆಯಲ್ಲಿರುವ ವಿಮಲ್ ಹಾರ್ಡ್‍ವೇರ್ ಅಂಗಡಿ ಮಳಿಗೆಯ ಮಾಲೀಕ ಮದನ್ ಮತ್ತು ಕುಟುಂಬ ತುಕಡಿಯ ಅಧಿಕಾರಿಯನ್ನು ಸಂಪರ್ಕಿಸಿ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದು, ತಾ. 15 ರಂದು ಬೆಳಿಗ್ಗೆ ಸರಳ ರೀತಿಯಲ್ಲಿ ಸಿಬ್ಬಂದಿಗಳಿಗೆ ರಕ್ಷೆಯನ್ನು ಕಟ್ಟಿ ಸಿಹಿ ಹಂಚುವ ಮೂಲಕ ಹಬ್ಬ ಆಚರಿಸಿಕೊಂಡರು. ಬಳಿಕ ರಕ್ಷಣಾ ಕಾರ್ಯಕ್ಕೆ ಆಗಮಿಸಿದ ಎಲ್ಲಾ ಸಿಬ್ಬಂದಿಗಳಿಗೂ ಶುಭ ಹಾರೈಸಿ ಪ್ರಾರ್ಥನೆ ಮಾಡಿದರು.
ಈ ಸಂದರ್ಭ ಮಾತನಾಡಿದ ಮದನ್, ರಕ್ಷೆಯು ಸ್ನೇಹ, ಸಹಕಾರ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ ಎಂದರು. ವೀರಾಜಪೇಟೆ-ಕೆದಮಳ್ಳೂರು ಪಂಚಾಯಿತಿಯ ತೋರ ಗ್ರಾಮದಲ್ಲಿ ಸಂಭವಿಸಿದ ಭೂಕುಸಿತ ಮತ್ತು ಪ್ರಾಣ ಹಾನಿಯ ಹಿನ್ನೆಲೆ ರಕ್ಷಣಾ ಕಾರ್ಯದಲ್ಲಿ ಸತತ 5 ದಿನಗಳಿಂದ ತೊಡಗಿಸಿಕೊಂಡಿರುವ 25 ಸಿಬ್ಬಂದಿಗಳಿಗೆ ಈ ಸಂದರ್ಭ ರಾಕಿ ಕಟ್ಟಲಾಯಿತು.
ಕಾರ್ಯಕ್ರಮದಲ್ಲಿ ಮದನ್, ಭಗತ್ ಸಿಂಗ್, ಲೂಂಬಾರಾಂ, ಮದನ್ ಅವರ ಮಕ್ಕಳಾದ ಶಾರದ, ಜೋಸ್ನ, ರಿಂಕು ಮತ್ತು ಯುವರಾಜ್ ಸಿಂಗ್ ಹಾಜರಿದ್ದರು.
ಆರ್.ಎಸ್.ಎಸ್.: ವೀರಾಜಪೇಟೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಮುಖ ಉತ್ಸವಗಳಲ್ಲೊಂದಾದ ರಕ್ಷಾ ಬಂಧನ ಕಾರ್ಯಕ್ರಮವನ್ನು ಸರಳ ರೀತಿಯಲ್ಲಿ ಆಚರಿಸಲಾಯಿತು. ನಗರ ಶಾಖೆ ವತಿಯಿಂದ ನಗರದ ಅಯ್ದ ಭಾಗಗಳಲ್ಲಿ ರಕ್ಷಾ ಬಂಧನ ಕಾರ್ಯಕ್ರಮ ಹಮ್ಮಿಕೊಂಡರು. ಬೆಳಗ್ಗಿನಿಂದ ಆರಂಭವಾದ ಕಾರ್ಯಕ್ರಮವು ನಗರದ ಮೀನುಪೇಟೆ, ಸುಣ್ಣದ ಬೀದಿ, ಪಂಜರ್‍ಪೇಟೆ, ಗಾಂಧಿನಗರ, ಶಿವಕೇರಿ ಮತ್ತು ನಗರದ ಚಿಕ್ಕಪೇಟೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಶ್ರಯ ಪಡೆದ ಸಂತ್ರಸ್ತ ಕುಟುಂಬಗಳೊಂದಿಗೆ ರಕ್ಷಾ ಬಂಧನ ಕಾರ್ಯಕ್ರಮ ನಡೆಸಲಾಯಿತು.
- ಕೆ.ಕೆ.ಎಸ್. ವೀರಾಜಪೇಟೆ