ಶನಿವಾರಸಂತೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಕೊಡ್ಲಿಪೇಟೆ ವಲಯದ ಎ ಒಕ್ಕೂಟದ ಪದಾಧಿಕಾರಿಗಳು ಸಮೀಪದ ಬೆಸೂರು ಗ್ರಾಮದ ಈಶ್ವರ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿದರು.

ಈ ಸಂದರ್ಭ ವಲಯ ಮೇಲ್ವಿಚಾರಕ ರಮೇಶ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಜಾತಾ, ಮಾಜಿ ಅಧ್ಯಕ್ಷೆ ಕುಸುಮಾ ಲಕ್ಕೇಗೌಡ, ಸೇವಾ ಪ್ರತಿನಿಧಿ ಶಾರದಮ್ಮ, ವಿಜಯಾ, ಲಕ್ಷ್ಮಮ್ಮ ಇತರ ಸದಸ್ಯರು, ಗ್ರಾಮಸ್ಥರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.ಕುಶಾಲನಗರ: ಕುಶಾಲನಗರ ಸಮೀಪದ ಕೊಪ್ಪ ಗ್ರಾಮ ವ್ಯಾಪ್ತಿಯಲ್ಲಿ ನೀರಿನಿಂದ ಮುಳುಗಿದ ಮನೆಗಳ ಮತ್ತು ಅಂಗಡಿ ಮುಂಗಟ್ಟುಗಳ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದ್ದು ಕೊಪ್ಪ ಗ್ರಾ.ಪಂ. ನೌಕರರು ಕಸ ವಿಲೇವಾರಿ ಕಾರ್ಯ ನಡೆಸುತ್ತಿದ್ದಾರೆ. ಗ್ರಾಮದ 100 ಕ್ಕೂ ಅಧಿಕ ಮನೆಗಳು ನೀರಿನಿಂದ ಆವೃತಗೊಂಡು ತ್ಯಾಜ್ಯ ವಸ್ತುಗಳು ರಸ್ತೆ ಬದಿಯಲ್ಲಿ ರಾಶಿ ಬಿದ್ದಿರುವ ದೃಶ್ಯ ಕಂಡುಬಂದಿದೆ.

ಪೌರಕಾರ್ಮಿಕರು ಟ್ರ್ಯಾಕ್ಟರ್‍ನಲ್ಲಿ ತುಂಬಿ ತೆರವುಗೊಳಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.ಚೆಟ್ಟಳ್ಳಿ: ಭಾರೀ ಮಳೆಗೆ ಜಲಾವೃತಗೊಂಡಿದ್ದ ಕುಶಾಲನಗರ ಸಮೀಪದ ದಂಡಿನಪೇಟೆಯ ಅಂಗನವಾಡಿ ಕೇಂದ್ರವನ್ನು ಕುಶಾಲನಗರದ ಎಸ್.ಡಿ.ಪಿ.ಐ. ಕಾರ್ಯಕರ್ತರು ಸ್ವಚ್ಛಗೊಳಿಸಿದರು.

ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಶಫಿ ನೇತೃತ್ವದ ತಂಡವು ಅಂಗನವಾಡಿಯ ಒಳಭಾಗ ಹಾಗೂ ಹೊರಭಾಗವನ್ನು ಶುಚಿಗೊಳಿಸಿದರು. ನಂತರ ಮಾತನಾಡಿದ ಶಫಿ, ಅಂಗನವಾಡಿ ಕೇಂದ್ರವನ್ನು ಸ್ವಚ್ಛಗೊಳಿಸುವ ಕಾರ್ಯ ನಗರ ಎಸ್.ಡಿ.ಪಿ.ಐ. ಸಂಘಟನೆಯಿಂದ ನಡೆದಿದ್ದು, ನೆರೆ ಆವರಿಸುವದಕ್ಕೂ ಮುನ್ನ ಅಂಗನವಾಡಿಯ ವಸ್ತುಗಳನ್ನು ಸ್ಥಳಾಂತರಿಸಲು ಎಸ್.ಡಿ.ಪಿ.ಐ. ಕಾರ್ಯಕರ್ತರು ಕಾರ್ಯನಿರ್ವಹಿಸಿದ್ದರು. ಸ್ಥಳೀಯ ವಾರ್ಡ್ ಸದಸ್ಯೆಯಿಂದ ಯಾವದೇ ರೀತಿಯ ಸಹಕಾರ ದೊರಕುತ್ತಿಲ್ಲ. ಶಿಥಿಲಾವಸ್ಥೆ ಯಿಂದ ಕೂಡಿರುವ ಅಂಗನವಾಡಿ ಕೇಂದ್ರದ ಅಭಿವೃದ್ಧಿ ಬಗ್ಗೆ ವಾರ್ಡ್ ಸದಸ್ಯೆ ಗಮನ ಹರಿಸಬೇಕಾಗಿದೆ ಎಂದು ಒತ್ತಾಯಿಸಿದರು.

ಅಂಗನಾಡಿ ಸ್ವಚ್ಛತೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಿದ ಎಸ್.ಡಿ.ಪಿ.ಐ. ಸಂಘಟನೆಯವರಿಗೆ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕಿ ಕೃತಜ್ಞತೆ ಸಲ್ಲಿಸಿದರು. ಈ ಸಂದರ್ಭ ಎಸ್.ಡಿ.ಪಿ.ಐ. ಕಾರ್ಯಕರ್ತರಾದ ಅಕ್ಬರ್, ಖಲೀಲ್, ರಷೀದ್, ಅಜೀಜ್, ಭಾಷಾ, ಶರೀಫ್ ಹಾಗೂ ಮತ್ತಿತರರು ಇದ್ದರು.ಕೂಡಿಗೆ: ಸೋಮವಾರಪೇಟೆಯ ಭಾರತಿ ಯುವಕ ಸಂಘದ ತಂಡವೊಂದು ಕುಶಾಲನಗರದಲ್ಲಿ ಪ್ರವಾಹದಿಂದ ಮನೆಯೊಳಗೆ ಕೆಸರು ಮಣ್ಣು ತುಂಬಿಕೊಂಡಿದ್ದನ್ನು ಸ್ವಚ್ಛತಾ ಸಲಕರಣೆಗಳನ್ನು ಉಪಯೋಗಿಸಿಕೊಂಡು ಸ್ವಚ್ಛಗೊಳಿಸುವ ಮೂಲಕ ಮಾನವೀಯತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.

ಕುಶಾಲನಗರದ ಸಾಯಿ ಬಡಾವಣೆಯಲ್ಲಿ ಸೋಮವಾರಪೇಟೆಯ ಭಾರತಿ ಯುವಕ ಸಂಘದ ತಂಡವೊಂದು ಮನೆಯ ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವದನ್ನು ಗಮನಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಅವರು ಭಾರತಿ ಯುವಕ ಸಂಘವನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಮತ್ತೊಮ್ಮೆ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸುವಂತೆ ಕೋರಿದ್ದರು.

ಪ್ರವಾಹದಿಂದ ಕುಶಾಲನಗರದ ರಸುಲ್ ಬಡಾವಣೆಯಲ್ಲಿರುವ ಭಾರತಿ ಪ್ರಶಾಂತ್ ಅವರ ಮನೆಯು ಕೆಸರು ಮಿಶ್ರಿತ ನೀರಿನಲ್ಲಿ ಸಂಪೂರ್ಣ ಮುಳುಗಿದ್ದು, ಸ್ವಚ್ಛಗೊಳಿಸಲು ಸಾಧ್ಯವೇ ಇಲ್ಲದಂತಹ ಸ್ಥಿತಿಯಲ್ಲಿದ್ದ ಮನೆಯನ್ನು ಸ್ವಚ್ಛಗೊಳಿಸಲು ಭಾರತಿ ಯುವಕ ಸಂಘದ ತಂಡವು ಮುಂದಾಗಿ ಸ್ವಚ್ಛಗೊಳಿಸುವ ಸಲಕರಣೆಗಳೊಂದಿಗೆ ಸ್ವಾತಂತ್ರೋತ್ಸವದಂದು ಆಗಮಿಸಿ ಉಚಿತವಾಗಿ ಸ್ವಚ್ಛಗೊಳಿಸಿ ಮಾನವೀಯತೆ ಮೆರೆದಿದ್ದಾರೆ.

ಭಾರತೀ ಯುವಕ ಸಂಘದ ತಂಡದ ಸದಸ್ಯರಾದ ಸೋಮವಾರಪೇಟೆ ಬ್ರಾಹ್ಮಣರ ಸಂಘದ ಕಾರ್ಯದರ್ಶಿ ಶ್ರೀಕಾಂತ್, ಗ್ರಾ.ಪಂ. ಸದಸ್ಯ ಧರ್ಮಪ್ಪ, ಸುಬ್ರಮಣ್ಯ, ಕೃಷ್ಣಮೂರ್ತಿ ಸೇರಿದಂತೆ 10 ಜನರ ತಂಡವು ಕುಶಾಲನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಒಂದೊಂದು ಮನೆಗಳ ಸ್ವಚ್ಛ ಕಾರ್ಯದಲ್ಲಿ ತೊಡಗಿದ್ದಾರೆ.

ಹುಟ್ಟುಹಬ್ಬ ಆಚರಣೆ: ಭಾರತಿ ಯುವಕ ಸಂಘದ ತಂಡದ ಸದಸ್ಯ ಕೃಷ್ಣಮೂರ್ತಿ ಅವರ ಹುಟ್ಟುಹಬ್ಬವನ್ನು ನೊಂದವರ ಸೇವೆ ಮಾಡುವ ಮುಖಾಂತರ ಗೆಳೆಯರೊಂದಿಗೆ ಸೇರಿ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದ ಭಾರತಿ ಪ್ರಶಾಂತ್ ಅವರ ಮನೆಯ ಮುಂದೆ ಕೇಕ್ ಕತ್ತರಿಸಿ ಸಂಭ್ರಮದ ಹುಟ್ಟುಹಬ್ಬ ಆಚರಣೆ ವಿಶೇಷವಾಗಿತ್ತು.