ಮಡಿಕೇರಿ, ಆ. 21: ಕ್ಷುಲ್ಲಕ ಕಾರಣಕ್ಕೆ ವೃದ್ಧ ರೋರ್ವರನ್ನು ಕತ್ತಿಯಿಂದ ಕಡಿದು ಹತ್ಯೆ ಮಾಡಿರುವ ಪ್ರಕರಣ ಮರಗೋಡುವಿ ನಲ್ಲಿ ಸಂಭವಿಸಿದೆ. ಕೂಲಿ ಕಾರ್ಮಿಕ ಕುರುಬ ಜನಾಂಗದ ಸುಬ್ಬ (70) ಹತ್ಯೆಗೀಡಾದ ದುರ್ದೈವಿ.ಮರಗೋಡುವಿನ ಕಾನಡ್ಕ ಗಣಪತಿ ಅವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದ ಸುಬ್ಬ ಅವರ ಮೃತದೇಹ ಇಂದು ಬೆಳಿಗ್ಗೆ ಮರಗೋಡು - ಕತ್ತಲೆಕಾಡು ರಸ್ತೆಯ ದೊಡ್ಡೋಣಿ ಬಳಿಯ ಬಸ್ ತಂಗುದಾಣದಲ್ಲಿ ಗೋಚರಿಸಿದೆ. ಮೃತದೇಹ ನೋಡಿದ ಗ್ರಾಮಸ್ಥರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ. ಠಾಣಾಧಿಕಾರಿ ಚೇತನ್, ಎಸ್‍ಪಿ ಸುಮನ್ ಡಿ.ಪಿ., ವೃತ್ತ ನಿರೀಕ್ಷಕರ ಅನೂಪ್ ಮಾದಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಮೃತದೇಹದ ಕೆನ್ನೆ, ಕುತ್ತಿಗೆ ಭಾಗದಲ್ಲಿ ಕತ್ತಿಯೇಟಿನ ಗುರುತು ಕಂಡು ಬಂದ ಹಿನ್ನೆಲೆ ಕೊಲೆ ಮೊಕದ್ದಮೆ ದಾಖಲಿಸಿ ಆರೋಪಿಗಳ ಪತ್ತೆಗಾಗಿ ಎರಡು ತಂಡಗಳನ್ನು ರಚಿಸಿ ಕಾರ್ಯೋನ್ಮುಖವಾಗಿದ್ದಾರೆ.ಓರ್ವ ವಶಕ್ಕೆ : ಪ್ರಕರಣ ಬೆಳಕಿಗೆ ಬರುವಂತೆ ಮರಗೋಡು ಗ್ರಾಮಸ್ಥರು ಕಾರ್ಯಾಚರಣೆಗಿಳಿದಿದ್ದಾರೆ. ಪೊಲೀಸರ ಸಹಕಾರ ದೊಂದಿಗೆ ಬೆಳಿಗ್ಗೆಯಿಂದಲೇ ಹುಡುಕಾಟ ಆರಂಭಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಶ್ವಾನ ದಳ ಅಲ್ಲಿನ ನಿವಾಸಿ ಮುರಳಿ ಎಂಬವರ ಲೈನ್‍ಮನೆಯಲ್ಲಿ ವಾಸವಿರುವ ಕಾರ್ಮಿಕ ರವಿಯ ಮನೆಯತ್ತ ತೆರಳಿದೆ. ಈ ಸಂದರ್ಭದಲ್ಲಿ ಅಲ್ಲಿದ್ದ ರವಿ ತನ್ನ ಮಗುವಿನೊಂದಿಗೆ ಓಡಿ ಪರಾರಿಯಾಗಿದ್ದಾನೆ. ರವಿಯ ಸಹೋದರ ಕರಿಯ ಎಂಬಾತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಮದ್ಯದ ಅಮಲಿನಲ್ಲಿ ಹತ್ಯೆಯಾಗಿರುವ ಶಂಖೆಯಿದ್ದು, ಪೊಲೀಸರು ಮರಗೋಡುವಿನಲ್ಲಿ ರಸ್ತೆ ಬದಿ ಇರುವ ಅಂಗಡಿ, ಮನೆಗಳ ಸಿಸಿ ಕ್ಯಾಮರಾದಲ್ಲಿನ ನಡಾವಳಿಗಳನ್ನು ಪರಿಶೀಲಿಸಿ ಮಾಹಿತಿ ಕಲೆ ಹಾಕಿರುವ ಬಗ್ಗೆ ತಿಳಿದು ಬಂದಿದೆ.