ಮಡಿಕೇರಿ, ಆ. 21: ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್‍ನ 140ನೇ ವಾರ್ಷಿಕ ಮಹಾಸಭೆ ಪಾಲಿಬೆಟ್ಟದಲ್ಲಿರುವ ಟಾಟಾ ಕಾಫಿ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು.ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್‍ನ ಅಧ್ಯಕ್ಷ ಕೆ.ಜಿ. ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿ; ಸಂಘವು ಕಳೆದ ವರ್ಷ ಸಂಭವಿಸಿದ ಭೂಕುಸಿತದಲ್ಲಿ ಧ್ವಂಸಗೊಂಡ 39 ಗ್ರಾಮಗಳ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಒದಗಿಸುವಲ್ಲಿ ಕೇಂದ್ರ ಸರಕಾರ, ರಾಜ್ಯ ಸರ್ಕಾರ ಮತ್ತು ಸಂಬಂಧಪಟ್ಟ ಇಲಾಖೆಗಳೊಂದಿಗೆ ನಡೆಸಿದ ಹೋರಾಟ ಮತ್ತು ಪ್ರಯತ್ನಗಳ (ಮೊದಲ ಪುಟದಿಂದ) ಬಗ್ಗೆ ವಿವರಣೆ ನೀಡಿದರು. ಅಲ್ಲದೆ ಕೃಷಿ ಸಾಲ ಮನ್ನಾ, ಅವಧಿ ಸಾಲಗಳ ಪುನರ್‍ರಚನೆ, ಬೆಳೆ ನಷ್ಟಕ್ಕೆ ಪರಿಹಾರ, ಧ್ವಂಸಗೊಂಡ ಪ್ರದೇಶಗಳಲ್ಲಿ ತೋಟಗಳನ್ನು ಪುನಃ ಸ್ಥಾಪಿಸಲು ನೆರವು, ಸಂತ್ರಸ್ತರಿಗೆ ವಸತಿ, ಮಕ್ಕಳಿಗೆ ಉಚಿತ ಶಿಕ್ಷಣ ಮತ್ತು ಸಂತ್ರಸ್ತ ಕುಟುಂಬಗಳಲ್ಲಿ ಒಬ್ಬ ಸದಸ್ಯರಿಗೆ ಉದ್ಯೋಗ, ಇವುಗಳ ಕುರಿತು ಸರ್ಕಾರದೊಂದಿಗೆ ಪ್ರಯತ್ನ ಇನ್ನೂ ಮುಂದುವರೆದಿದೆ ಎಂಬದಾಗಿ ಮಾಹಿತಿ ನೀಡಿದರು.
ಸರಕಾರದಿಂದ ತ್ವರಿತಗತಿಯಲ್ಲಿ ನಡೆಯಬೇಕಾಗಿರುವ ಮುಖ್ಯ ಕೆಲಸಗಳಾದ ಹಾರಂಗಿ ಹಿನ್ನೀರಿನ ಪ್ರದೇಶದಿಂದ ಹೂಳು ತೆಗೆಯುವದು, ಪ್ರಮುಖ ರಸ್ತೆಗಳ ದುರ್ಬಲ ಪ್ರದೇಶಗಳಲ್ಲಿ ಶಾಶ್ವತ ತಡೆಗೋಡೆಗಳನ್ನು ನಿರ್ಮಿಸುವದು ಮತ್ತು ಅವುಗಳ ನಿರ್ವಹಣೆ ಬಗ್ಗೆ ಗಮನ ಸೆಳೆದರು.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಕುಸಿಯುತ್ತಿರುವದರ ಬಗ್ಗೆ ಕಳವಳ ವ್ಯಕ್ತಪಡಿಸುತ್ತಾ; ಇತರ ಕಾಫಿ ಉತ್ಪಾದಿಸುವ ದೇಶಗಳಾದ ಬ್ರೆಜಿಲ್, ವಿಯೆಟ್ನಾಂ ಇವುಗಳಿಂದ ಹೆಚ್ಚಿನ ಉತ್ಪಾದನೆ ಇದಕ್ಕೆ ಕಾರಣವೆಂದರು. ಅಂತರ್ರಾಷ್ಟ್ರೀಯ ಕಾಫಿ ಸೇವಿಸುವ ದೇಶಗಳಲ್ಲಿ ಕಾಫಿ ಬಳಕೆಯಲ್ಲಿ ಹೆಚ್ಚಳ ಕಂಡು ಬಂದರೂ, ಭಾರತದಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಬಳಕೆ 90 ಗ್ರಾಂ. ಆಗಿ ಉಳಿದಿದೆ. ಆದರೆ, ಐರೋಪ್ಯ ರಾಷ್ಟ್ರಗಳಲ್ಲಿ ಒಬ್ಬ ವ್ಯಕ್ತಿಯ ಸರಾಸರಿ ಕಾಫಿ ಬಳಕೆ 4 ಕೆ.ಜಿ. ಆಗಿರುತ್ತದೆ. ಭಾರತೀಯ ಕಾಫಿಯನ್ನು ಬಳಸಿಕೊಂಡು ದೇಶೀಯ ಬಳಕೆಯನ್ನು ಉತ್ತೇಜಿಸಲು ಕರೆ ನೀಡಿದರು. ಅಲ್ಲದೆ ಭಾರತದಲ್ಲಿ ನಮ್ಮ ಕಾಫಿ ಇಳುವರಿಯನ್ನು ವಿಯೆಟ್ನಾಂ ಮತ್ತು ಬ್ರೆಜಿಲ್‍ಗೆ ಸಮನಾಗಿ ಸುಧಾರಿಸದಿದ್ದಲ್ಲಿ ನಮ್ಮ ಕಾಫಿ ಕೃಷಿ ಅಶಕ್ತವಾಗುತ್ತದೆ ಎಂದರು.
ಈ ನಿಟ್ಟಿನಲ್ಲಿ ನಿರ್ದಿಷ್ಟ ವಲಯಕ್ಕೆ ಉತ್ತಮ ಇಳುವರಿ ನೀಡುವ ಪ್ರಬೇಧಗಳ ಅಬೀಜ ಸಂತಾನೋತ್ಪತ್ತಿಯತ್ತ ಗಮನ ಹರಿಸಲು ಸಿಪಿಎ ಸದಸ್ಯರು, ಕಾಫಿ ಮಂಡಳಿಯ ವಿಜ್ಞಾನಿಗಳು, ಟಾಟಾ ಕಾಫಿ ಮತ್ತು ಅರಣ್ಯ ಕಾಲೇಜಿನ ಸದಸ್ಯರನ್ನು ಒಳಗೊಂಡ ಒಂದು ಗುಂಪನ್ನು ರಚಿಸಲಾಗಿದೆ ಎಂದು ಮಾಹಿತಿ ನೀಡಿದರು. ಇತ್ತೀಚೆಗೆ ಇತರ ವಾಣಿಜ್ಯ ಬೆಳೆಗಳಾದ ಏಲಕ್ಕಿ, ವೆನಿಲ್ಲಾ, ಶುಂಠಿ, ಅರಿಶಿನ, ಆವಕಾಡೂ ಇವುಗಳ ಬೆಲೆಯೂ ಆಕರ್ಷಕವಾಗುತ್ತಿರುವದರಿಂದ ಜಿಲ್ಲೆಯ ಬೆಳೆಗಾರರು ಈ ಬೆಳೆಗಳನ್ನೂ ತಮ್ಮ ಕೃಷಿ ಪದ್ಧತಿಯಲ್ಲಿ ಅಳವಡಿಸಿಕೊಳ್ಳಲು ಕರೆ ನೀಡಿದರು. ಇದರ ಜೊತೆಗೆ ಸಿದ್ಧ ಮಾರುಕಟ್ಟೆ ಲಭ್ಯವಿರುವ ಮತ್ತು ಸರ್ಕಾರದಿಂದ ಸಹಾಯಧನ ಲಭ್ಯವಿರುವ ಬಿದಿರು ಕೃಷಿಯನ್ನು ಮಾಡಲು ಉತ್ತೇಜಿಸಿದರು.
ಕಾಫಿ ಮಂಡಳಿಯಿಂದ ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ ಸಬ್ಸಿಡಿ ಯೋಜನೆ ಈಗ 10 ಹೆಕ್ಟೇರ್‍ವರೆಗಿನ ಸಣ್ಣ ಬೆಳೆಗಾರರಿಗೆ ಅನ್ವಯವಾಗುವಂತೆ ಮರು ವಿಸ್ತರಣೆಯಾಗಿರುವದರ ಬಗ್ಗೆ ಮಾಹಿತಿ ನೀಡಿದರು.
ರಸ್ತೆ ಅಗಲೀಕರಣ ಬೇಡ
ಹೆದ್ದಾರಿ ಅಗಲೀಕರಣದ ವಿಷಯವಾಗಿ ಮಾತನಾಡುತ್ತಾ, ಕೊಡಗು ಜಿಲ್ಲೆ ಅಗತ್ಯತೆಗಳ ಬೆಳವಣಿಗೆಗಳಿಂದ ಪ್ರತ್ಯೇಕವಾಗಿ ಉಳಿಯಲು ಸಾಧ್ಯವಿಲ್ಲ ಎಂಬ ಜಿಲ್ಲೆಯ ಸಾಮಾನ್ಯ ಅಭಿಪ್ರಾಯಕ್ಕೆ ತಮ್ಮ ಸಂಘವು ಬದ್ಧ ಎಂಬದಾಗಿ ಮಾಹಿತಿ ನೀಡಿದರು. ಆದರೆ ಮಡಿಕೇರಿ ನಗರ ಬೆಟ್ಟದ ಮೇಲಿರುವದರಿಂದ ಅತಿ ಸೂಕ್ಷ್ಮ ಪರಿಸರವನ್ನು ಹೊಂದಿದೆ. ಇಲ್ಲಿ ರಸ್ತೆ ಅಗಲೀಕರಣ ಮಾಡಿದರೆ ಕಳೆದ ವರ್ಷದಂತೆ ಭೂಕುಸಿತದ ಅಪಾಯವನ್ನು ಎದುರಿಸಬೇಕಾಗುತ್ತದೆ. ಕಳೆದ ವರ್ಷ ಭೂಕುಸಿತವಾದ ಈ ರಸ್ತೆಯಲ್ಲಿ ತಾತ್ಕಾಲಿಕವಾಗಿ ಸರಿಪಡಿಸುವಿಕೆ ಮಾಡಲಾಗಿದೆ. ಮಡಿಕೇರಿ ನಗರಪ್ರದೇಶದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ನಗರ ಮಿತಿಯೊಳಗೆ ಪ್ರಸ್ತುತ ಎರಡು ಪಥದಲ್ಲೇ ಇಟ್ಟು, ಕಲ್ವರ್ಟ್ ಮತ್ತು ಚರಂಡಿಗಳೊಂದಿಗೆ ನವೀಕರಿಸಿಕೊಳ್ಳತಕ್ಕದೆಂಬದಾಗಿ ಅಭಿಪ್ರಾಯಪಟ್ಟರು.
25 ಲಕ್ಷ ಪರಿಹಾರಕ್ಕೆ ಒತ್ತಾಯ
ಮಾನವ, ಪ್ರಾಣಿಗಳ ಸಂಘರ್ಷದ ಬಗ್ಗೆ ಮಾತನಾಡುತ್ತಾ, ಕಾಡು ಪ್ರಾಣಿಗಳಿಂದ ವಿಶೇಷವಾಗಿ ಆನೆಗಳಿಂದ ಮಾನವ ಜೀವ ಮತ್ತು ಆಸ್ತಿಗೆ ಜಿಲ್ಲೆಯಲ್ಲಿ ಹೆಚ್ಚಿನ ಅಪಾಯವಿದೆ. ಅರಣ್ಯ ಇಲಾಖೆ ಮತ್ತು ಸರ್ಕಾರದಿಂದ ನಮ್ಮ ಮನವಿಗಳಿಗೆ ಯಾವದೇ ಶಾಶ್ವತ ಪರಿಹಾರ ಸಿಕ್ಕಿರುವದಿಲ್ಲ. ರೈಲ್ವೆ ಹಳಿ ಬೇಲಿ ಸ್ವಲ್ಪ ಮಟ್ಟಿಗೆ ಆನೆಗಳನ್ನು ತಡೆಯಲು ಸಹಕಾರಿಯಾಗಿರುವದರಿಂದ, ಸರ್ಕಾರ ಅರಣ್ಯ ಇಲಾಖೆಗೆ ಸಾಕಷ್ಟು ಹಣವನ್ನು ನೀಡಿ ತ್ವರಿತಗತಿಯಲ್ಲಿ ಈ ಕೆಲಸವನ್ನು ಮಾಡಿಸಬೇಕಾಗಿ ರಾಜ್ಯ ಸರ್ಕಾರವನ್ನು ಕೋರುತ್ತೇವೆ ಎಂದರು. ಅಲ್ಲದೆ ಮಾನವನ ಪ್ರಾಣಹಾನಿಗೆ ಸರಕಾರ ನೀಡಲಾಗುತ್ತಿರುವ ಪರಿಹಾರವನ್ನು ಈಗಿನ 5 ಲಕ್ಷ ರೂ.ಗಳಿಂದ ರೂ. 25 ಲಕ್ಷಕ್ಕೆ ಏರಿಸಬೇಕಾಗಿ ಕೋರಿದರು. ಮಾತ್ರವಲ್ಲದೆ ಸರಕಾರವು ಕಾಫಿ ಮಂಡಳಿಯ ಮಾನದಂಡದ ಆಧಾರದ ಮೇಲೆ ಬೆಳೆಗಾರರ ಆಸ್ತಿಪಾಸ್ತಿ ನಷ್ಟಕ್ಕೆ ಪರಿಹಾರವನ್ನು ಲೆಕ್ಕಹಾಕಲು ಅರಣ್ಯ ಇಲಾಖೆಗೆ ಸಲಹೆ ನೀಡುವಂತೆ ಹೇಳಿದರು.
ಸಂಘದ ಕಾರ್ಯಕ್ರಮಗಳ ಬಗ್ಗೆ ಮಾತನಾಡುತ್ತಾ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್ ಪ್ರಸಕ್ತ ವರ್ಷದಲ್ಲಿ ಕಾಫಿ ಪಲ್ಪಿಂಗ್ ಎಫ್ಲುಯೆಂಟ್ ಮ್ಯಾನೇಜ್‍ಮೆಂಟ್, ನೀರಾವರಿ ಮತ್ತು ಫಲೀಕರಣ, ಹನಿ ನೀರಾವರಿ ಮತ್ತು ಬಹುಕಾಂಡ ಬೆಳೆ ಮಾದರಿಯ ಕ್ಷೇತ್ರಕ್ಕೆ ಭೇಟಿ, ಕಾಫಿ ಕೃಷಿ ಅಂಶಗಳ ಬಗ್ಗೆ ಜಾಗೃತಿ, ಕ್ಲೋನಲ್ ಪ್ರಸರಣದ ಬಗ್ಗೆ ಜಾಗೃತಿ ತೋಟ ಕಾರ್ಮಿಕರು ಮತ್ತು ಮಕ್ಕಳನ್ನು ಸರಕು ವಾಹನಗಳಲ್ಲಿ ಸಾಗಿಸುವದರ ಬಗ್ಗೆ ಜಾಗೃತಿ ಮತ್ತು ಅದರಿಂದಾಗುವ ಅನಾಹುತಗಳು ಮುಂತಾದ ಅನೇಕ ಉಪಯುಕ್ತ ಕಾರ್ಯಕ್ರಮಗಳನ್ನು ಬೆಳೆಗಾರರ ಮಾಹಿತಿಗಾಗಿ ನಡೆಸಿದ್ದರ ಬಗ್ಗೆ ಮಾಹಿತಿ ನೀಡಿದರು.
ಮುಖ್ಯ ಅತಿಥಿ ಚಾಕೊ ಪಿ. ಥೋಮಸ್ ತಮ್ಮ ಭಾಷಣದಲ್ಲಿ ಟಾಟಾ ಕಾಫಿ ಸಂಸ್ಥೆಯು ಅಳವಡಿಸಿಕೊಂಡಿರುವ ಕೃಷಿ ಪದ್ಧತಿಯ ಬಗ್ಗೆ ಮಾಹಿತಿ ನೀಡಿದರು. ಗ್ರಾಹಕರ ಅಗತ್ಯತೆಗೆ ತಕ್ಕಂತೆ ಗುಣಮಟ್ಟದ ಕಾಫಿ ಉತ್ಪನ್ನಗಳನ್ನು ಎಟುಕುವ ಬೆಲೆಯಲ್ಲಿ ದೊರಕಿಸಿ ಕೊಡುವದರಿಂದ ಮಾರುಕಟ್ಟೆಯನ್ನು ಸುಧಾರಿಸಬಹುದೆಂದರು. ಅಲ್ಲದೆ ಕಾಫಿ ಕೃಷಿಯಲ್ಲಿ ಯಂತ್ರೋಪಕರಣಗಳ ಮಹತ್ವದ ಬಗ್ಗೆಯೂ ಬೆಳೆಗಾರರಿಗೆ ಕಿವಿಮಾತು ಹೇಳಿದರು. ಇದೇ ಸಂದರ್ಭದಲ್ಲಿ ಪೊನ್ನಂಪೇಟೆ ಅರಣ್ಯ ಕಾಲೇಜಿನ ಮುಖ್ಯಸ್ಥ ಡಾ. ಸಿ.ಜಿ. ಕುಶಾಲಪ್ಪ ಮತ್ತು ಕೊಕೊ ಕೋಲ ಕಂಪೆನಿಯ ಮಾಜಿ ನಿರ್ದೇಶಕ ಐಚೆಟ್ಟಿರ ಬಿ. ಬೋಪಣ್ಣ ಇವರುಗಳಿಂದ ತಾಂತ್ರಿಕ ಭಾಷಣ ಏರ್ಪಡಿಸಲಾಗಿತ್ತು.