ಕುಶಾಲನಗರ, ಆ. 21: 21 ವರ್ಷಗಳ ಹಿಂದೆ ಕುಶಾಲನಗರದಲ್ಲಿ ರಾಹುಲ್ ಪೀಟರ್ ಅದೇ ವ್ಯಕ್ತಿ ಮಧ್ಯಪ್ರದೇಶದಲ್ಲಿ ಸ್ಯಾಮ್ ಅಂಥೋಣಿ, ಮಂಗಳೂರಿನಲ್ಲಿ ಸ್ಯಾಮ್ ಪೀಟರ್. ಇದು ಮಂಗಳೂರಿನಲ್ಲಿ ಕೇಂದ್ರ ಸರಕಾರದ ನ್ಯಾಷನಲ್ ಕ್ರೈಂ ಇನ್ವೆಸ್ಟಿಗೇಷನ್ ಬ್ಯುರೊದ ಅಧಿಕಾರಿಯೆಂದು ನಕಲಿ ಗುರುತಿನ ಚೀಟಿ ತಯಾರಿಸಿ ವಾಹನದಲ್ಲಿ ಇಲಾಖಾ ನಾಮಫಲಕ ಅಳವಡಿಸಿ ಕೋಟ್ಯಾಂತರ ರೂಪಾಯಿ ವಂಚಿಸುತ್ತಿದ್ದ ಟಿ.ಸ್ಯಾಮ್ ಪೀಟರ್ (53) ಎಂಬ ವಂಚಕನ ಕಥೆ.

ಎರಡು ದಶಕಗಳ ಹಿಂದೆ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಕೂಡ ಈತನ ಮೇಲೆ ಎರಡು ವಂಚನೆ ಪ್ರಕರಣಗಳು ದಾಖಲಾಗಿದ್ದ ಕಡತಕ್ಕೆ ಮತ್ತೆ ಜೀವ ದೊರೆತಿದೆ.1997 ರಲ್ಲಿ ಕುಶಾಲನಗರದಲ್ಲಿ ದಿಢೀರ್ ಕಾಣಿಸಿಕೊಂಡ ರಾಹುಲ್ ಪೀಟರ್ ಒಂದು ವರ್ಷದ ನಂತರ ಅದೇ ವೇಗದಲ್ಲಿ ನಾಪತ್ತೆಯಾಗಿದ್ದ. ಈ ನಡುವೆ ಪಟ್ಟಣದ ಇಂದಿರಾ ಬಡಾವಣೆಯಲ್ಲಿ 8 ಲಕ್ಷ ರೂ.ಗಳಿಗೆ ಮನೆಯೊಂದನ್ನು ಖರೀದಿಸಿ ತನ್ನ ಪತ್ನಿ ಮತ್ತು ಪುತ್ರಿ ಎಂದುಕೊಂಡವರ ಜೊತೆಗೆ ಐಷಾರಾಮಿ ಜೀವನ ಸಾಗಿಸಲು ಪ್ರಾರಂಭಿಸಿದ್ದ. ಕರಿಮೆಣಸು, ಏಲಕ್ಕಿ ರಫ್ತು ವ್ಯಾಪಾರ ಮಾಡುತ್ತಿದ್ದೇನೆ ಎಂದು ನಂಬಿಸಿ ವಾಹನವೊಂದರಲ್ಲಿ ಆಂಟೆನಾ ಸಿಲುಕಿಸಿಕೊಂಡು ಓಡಾಟ ಮಾಡುತ್ತಿದ್ದವನನ್ನು ಕಂಡು ಕುಶಾಲನಗರದ ಹಲವರು ಆತನ ಬಲೆಗೆ ಬಿದ್ದಿದ್ದು ನಂತರ ಕೈಕೈ ಹಿಸುಕಿಕೊಳ್ಳುವಂತಾಗಿದ್ದು ಇತಿಹಾಸ. ಇದರಲ್ಲಿ ಕುಶಾಲನಗರದ ಹೋಟೆಲ್ ಉದ್ಯಮಿಯೊಬ್ಬರು ಸೇರಿದಂತೆ ಕೂಡಿಗೆ ಬ್ಯಾಂಕ್ ಒಂದರ ವ್ಯವಸ್ಥಾಪಕರ ವಿಶ್ವಾಸವನ್ನು ಗಳಿಸಿ ಲಕ್ಷಾಂತರ ರೂ.ಗಳ ವಂಚನೆ ಮಾಡುವಲ್ಲಿ ಕೂಡ ಈ ರಾಹುಲ್ ಪೀಟರ್ ಯಶಸ್ವಿಯಾಗಿದ್ದ.

ಕುಶಾಲನಗರದ ಪ್ರತಿಷ್ಠಿತ ಕ್ಲಬ್ ಒಂದರದಲ್ಲಿ ಕೂಡ ಸದಸ್ಯತ್ವ ಪಡೆದ ರಾಹುಲ್ ಪೀಟರ್ ತಾನು ಮಧ್ಯಪ್ರದೇಶದ ಭೋಪಾಲ್ ನಿಂದ ಬಂದಿದ್ದೇನೆ. ಅನಿಲ ದುರಂತ ಸಂಭವಿಸಿ ತನ್ನ ಮಗಳಿಗೆ ಅನಾರೋಗ್ಯ ಉಂಟಾಗಿದೆ. ವೇಲಾಂಕಣಿ ದೇವತೆಯ ಅಣತಿಯಂತೆ ತನ್ನ ಮಗಳಿಗೆ ಕುಶಾಲನಗರ ಉತ್ತಮ ವಾತಾವರಣ ತಮ್ಮ ಕುಟುಂಬಕ್ಕೆ ಹೊಂದುತ್ತದೆ ಎಂದುಕೊಂಡು ವಂಚನೆಗೆ ತಳಹದಿ ಸೃಷ್ಟಿಸಿದ್ದ.

ಮೈಸೂರು ರಸ್ತೆಯ ಪಟ್ಟಣದ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರಲ್ಲಿ ವರ್ಗಾವಣೆ ಪತ್ರ ಇಲ್ಲದೆ ಶಾಲೆಗೆ ಕಂಪ್ಯೂಟರ್ ಒಂದನ್ನು ಉಚಿತವಾಗಿ ನೀಡಿ 6ನೇ ತರಗತಿಗೆ (ಮೊದಲ ಪುಟದಿಂದ) ಸೀಟು ಕೂಡ ದಕ್ಕಿಸಿಕೊಂಡಿದ್ದ. ತಾನು ಕುಶಾಲನಗರದಲ್ಲಿ ಸೂಪರ್ ಮಾರ್ಕೆಟ್ ಒಂದನ್ನು ತೆರೆಯಬೇಕೆಂದು ಸ್ಥಳೀಯ ಚರ್ಚ್‍ನ ಫಾದರ್ ವಿಶ್ವಾಸ ಗಳಿಸಿ ದೇವಾಲಯದ ಜಾಗವನ್ನು ಕಬಳಿಸಲು ಪ್ರಯತ್ನಿಸಿ ಅಲ್ಲಿ ಮಾತ್ರ ವಿಫಲನಾಗಿದ್ದ. ಆದರೆ ಈ ನಡುವೆ ಕುಶಾಲನಗರ ಮೈಸೂರು ರಸ್ತೆಯಲ್ಲಿ ವೇಲಾಂಕಣಿ ದೇವರ ಸಣ್ಣ ದೇವಾಲಯವನ್ನು ಕೂಡ ಕಟ್ಟಿ ಅಲ್ಲಿ ಹುಂಡಿಯೊಂದನ್ನು ಇಟ್ಟು ಅದರ ಎರಡು ಕೀಗಳಲ್ಲಿ ಒಂದನ್ನು ಫಾದರ್ ಕೈಯಲ್ಲಿ ಕೊಟ್ಟು ಇನ್ನೊಂದನ್ನು ತಾನು ಇಟ್ಟುಕೊಂಡಿದ್ದ. ನಂತರ ಹುಂಡಿಯಲ್ಲಿ ಸಾವಿರಾರು ರೂ.ಗಳ ಹಣ ಸಂಗ್ರಹವಾದ ಮೇಲೆ ಅದು ಕಳವಾಗಿದ್ದು ಈಗ ಇತಿಹಾಸ.

ಆಗಾಗ್ಯೆ ಬೆಂಗಳೂರಿಗೆ ಓಡಾಟ ಮಾಡುತ್ತಿದ್ದ ರಾಹುಲ್ ಪೀಟರ್ ಏನೂ ಬಿಸಿನೆಸ್ ಮಾಡುತ್ತಿಲ್ಲ ಎಂಬದು ತಡವಾಗಿ ತಿಳಿದುಬಂದಿದೆ. ಅಂದಿನ ಕಾಲದಲ್ಲಿ ಈತ ಮಾಡಿದ್ದು 3 ವಂಚನೆ ಪ್ರಕರಣಗಳು. ಒಂದು ಕೂಡಿಗೆ ಬ್ಯಾಂಕ್ ಒಂದರಲ್ಲಿ ಲಕ್ಷಲಕ್ಷ ರೂಗಳ ಮೊತ್ತದ ಚೆಕ್ ಡಿಸ್ಕೌಂಟ್ ಮಾಡುತ್ತಾ 10 ಲಕ್ಷ ರೂ. ಗಳ ಲೋನ್ ಪಡೆದಿದ್ದು. ಈ ನಡುವೆ 5 ಲಕ್ಷ ಚೆಕ್ ಡಿಸ್ಕೌಂಟ್ ಮಾಡಿ 20 ದಿನವಾದರೂ ಚೆಕ್ ಮಾತ್ರ ನಗದೀಕರಣವಾಗದೆ ಇರುವದು. ಇನ್ನೊಂದೆಡೆ ಗುಡ್ಡೆಹೊಸೂರು ಬ್ಯಾಂಕ್ ಒಂದರಲ್ಲಿ 3 ಲಕ್ಷ ರುಗಳ ಚೆಕ್ ಡಿಸ್ಕೌಂಟ್ ಮಾಡುವಲ್ಲಿ ಯಶಸ್ವಿಯಾಗಿದ್ದು. ಈ ಎರಡೂ ಪ್ರಕರಣಗಳು 1998 ರಲ್ಲಿ ಮೊಕದ್ದಮೆ ದಾಖಲಾಗಿರುವದು ಕಾಣಬಹುದು.

10 ಲಕ್ಷ ಸಾಲ ಪಡೆಯುವ ಸಂದರ್ಭ ಮಾತ್ರ ಕುಶಾಲನಗರದ ಹೋಟೆಲ್ ಉದ್ಯಮಿಯೊಬ್ಬರ ಜಾಮೀನು ಹಾಕಿಸುವಲ್ಲಿ ಈತ ಯಶಸ್ವಿಯಾಗಿದ್ದ. ನಂತರ ಹೊರಟು ಹೋದವನು ಮತ್ತೆ ಬರಲೇ ಇಲ್ಲ. ರಾಹುಲ್ ಪೀಟರ್ ನಾಪತ್ತೆ ಅನ್ನುವ ಮಾತುಗಳು ಅಲ್ಲಲ್ಲಿ ಸ್ವಲ್ಪ ದಿನಗಳ ಕಾಲ ಕೇಳಿಬಂದವು. ಇಂದಿರಾ ಬಡಾವಣೆಯಲ್ಲಿದ್ದ ಆತನ ಮನೆ ಮತ್ತು ಪೀಠೋಪಕರಣಗಳನ್ನು ಬ್ಯಾಂಕಿನವರು ಮಾರಿ ಹೇಗೋ 10 ಲಕ್ಷ ರೂ. ಗಳನ್ನು ಹೊಂದಿಸಿಕೊಳ್ಳುವದರೊಂದಿಗೆ ಜಾಮಿನುದಾರರಿಂದ ಉಳಿಕೆಯನ್ನು ಪಡೆದು ಸಾಲ ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಕುಶಾಲನಗರದಲ್ಲಿ ಮಾತ್ರವಲ್ಲದೆ ದೇಶದ ಹಲವೆಡೆ ರಾಹುಲ್ ಪೀಟರ್ ಲೀಲಾಜಾಲವಾಗಿ ವಂಚನೆ ಮಾಡಿ ನಾಪತ್ತೆಯಾಗುತ್ತಿದ್ದ. ತಮಿಳುನಾಡಿನಲ್ಲಿ ಸ್ಯಾಮ್ ಅಂಥೋಣಿ ಹೆಸರಿನಲ್ಲಿ ಸುಮಾರು 35 ಲಕ್ಷ ರೂ. ವಂಚಿಸಿದರೆ ಮಧ್ಯಪ್ರದೇಶದಲ್ಲಿ ಈತ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ. ಈ ಪ್ರಕರಣಗಳು ಸಿಬಿಐಗೆ ಹೋಗಿ ರೆಡ್ ಕಾರ್ನರ್ ನೋಟಿಸ್ ಕೂಡ ಈ ರಾಹುಲ್ ಪೀಟರ್ ಅಲಿಯಾಸ್ ಸ್ಯಾಮ್ ಅಂಥೋಣಿಗೆ ಹೊರಡಿಸಲಾಗಿತ್ತು. ಅತ್ಯುತ್ತಮವಾಗಿ ಇಂಗ್ಲೀಷ್‍ನಲ್ಲಿ ಮಾತನಾಡುತ್ತಿದ್ದ ಈತ ಎಲ್ಲರನ್ನು ಮರಳು ಮಾಡುತ್ತಿದ್ದ. ದುಬಾರಿ ಕಾರಿನಲ್ಲಿ ಓಡಾಡುತ್ತಿದ್ದ ಈತ ತಾನು ಐಟಿ ಬಿಟಿ ಕಂಪನಿಯ ಅಧಿಕಾರಿ ಎಂದು ಕೂಡ ಹೇಳಿಕೊಳ್ಳುತ್ತಿದ್ದ ಎಂದು ತಿಳಿದುಬಂದಿದೆ.

ಅತಿ ಗಣ್ಯರ ಜೊತೆ ಫೋಟೊ ಕೂಡ ಕ್ಲಿಕ್ಕಿಸಿಕೊಳ್ಳುತ್ತಿದ್ದ. ಉದ್ಯೋಗದ ಭರವಸೆ ನೀಡಿ ತಾನು ಸಿಬಿಐ ನಿರ್ದೇಶಕನೆಂದು ಇದೀಗ ಮಂಗಳೂರಿನಲ್ಲಿ ಸಿಕ್ಕಿ ಬಿದ್ದಿದ್ದಾನೆ. ಈತನ ಜೊತೆಗೆ ಕೊಡಗು ಮೂಲದ ಇಬ್ಬರು ಯುವಕರು ಕೂಡ ಈತನ ವಂಚನೆಗೆ ಸಿಲುಕಿಕೊಂಡಿದ್ದು ಪೊಲೀಸರ ವಶದಲ್ಲಿದ್ದಾರೆ.

ಮಾಜಿ ಸಚಿವ ಜಮೀರ್ ಅಹಮ್ಮದ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಬಾಲಿವುಡ್ ನಟರು, ಉನ್ನತ ಅಧಿಕಾರಿಗಳ ಜೊತೆ ಹಾಗೂ ಗಣ್ಯರೊಂದಿಗೆ ನಿಂತುಕೊಂಡಿರುವ ಈತನ ಫೋಟೊಗಳು ಕೂಡ ಈತನ ವಂಚನೆಗೆ ಸಾಥ್ ನೀಡಿವೆ ಎನ್ನುವ ಅಂಶಗಳು ಹೊರಬಿದ್ದಿವೆ.

ಊರಿನ ಹಿನ್ನಲೆ, ಅಲ್ಲಿನ ಗಣ್ಯರು, ಅಧಿಕಾರಿಗಳು ಮತ್ತು ಬ್ಯಾಂಕ್‍ಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಆನಂತರ ತನ್ನ ಮಾಸ್ಟರ್ ಪ್ಲಾನ್‍ನಲ್ಲಿ ಸಿಲುಕಿಸಿ ಮರಳು ಮಾಡುತ್ತಿದ್ದ ರಾಹುಲ್ ಪೀಟರ್ ಅಲಿಯಾಸ್ ಸ್ಯಾಮ್ ಅಂಥೋಣಿ ಅಲಿಯಾಸ್ ಸ್ಯಾಮ್ ಪೀಟರ್ ಇದೀಗ ಪೊಲೀಸರ ಕೈಗೆ ಸಿಲುಕಿ ಸಿಬಿಐ ಅಧಿಕಾರಿಗಳ ತಂಡ ಈತನನ್ನು ಸಧ್ಯದಲ್ಲೇ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಯಿದೆ.

ಮಂಗಳೂರಿನಲ್ಲಿ ಹೈಟೆಕ್ ವಂಚಕನ ಬಂಧನವಾಗುತ್ತಿದ್ದಂತೆಯೇ ಉನ್ನತ ಪೊಲೀಸ್ ಅಧಿಕಾರಿಗಳ ತಂಡ ಕುಶಾಲನಗರ ಪ್ರಕರಣದ ಬಗ್ಗೆ ಕೂಡ ಮಾಹಿತಿ ಕಲೆ ಹಾಕುತ್ತಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದು ಸಧ್ಯದಲ್ಲಿಯೇ ಕುಶಾಲನಗರಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ.