ಟಿ ಸಚಿವ ಸುರೇಶ್‍ಕುಮಾರ್ ಮುಕ್ತ ನುಡಿ ಟಿ ಜಿಲ್ಲೆಯ ಸಂತ್ರಸ್ತರಿಗೆ ನೆರವು ಭರವಸೆ ಕುಶಾಲನಗರ, ಆ. 21: ವಿಚಿತ್ರ ಸ್ಥಿತಿಯಲ್ಲಿ ರಾಜ್ಯ ಸಚಿವ ಸಂಪುಟ ರಚನೆಯಾಗಿದೆ. ಈಗಿನ ರಾಜಕೀಯ ಪರಿಸ್ಥಿತಿ ಹಾಗಿದೆ. ಕೊಡಗಿಗೆ ಅನ್ಯಾಯವಾಗಿದ್ದು ಮುಂದಿನ ಕೆಲವೇ ದಿನಗಳಲ್ಲಿ ಎಲ್ಲವೂ ಸರಿಹೋಗಲಿದೆ ಎಂದು ಸಚಿವರಾದ ಎಸ್. ಸುರೇಶ್‍ಕುಮಾರ್ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ “ಶಕ್ತಿ”ಯೊಂದಿಗೆ ಮಾತನಾಡಿ, ಕೊಡಗು-ದಕ್ಷಿಣ ಕನ್ನಡ ಸೇರಿದಂತೆ 3 ಜಿಲ್ಲೆಗಳಿಗೆ ಪ್ರಾತಿನಿಧ್ಯ ದೊರಕಿಲ್ಲ. ನನ್ನಂತೆಯೇ ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚುರಂಜನ್ ಕೂಡ 5 ಬಾರಿ ಶಾಸಕರಾಗಿ ಜನಪ್ರತಿನಿಧಿಯಾಗಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಕೆ.ಜಿ. ಬೋಪಯ್ಯ ಅವರು ಸಭಾಧ್ಯಕ್ಷರಾಗಿ ಅನುಭವ ಹೊಂದಿದ್ದು ಸಚಿವರಾಗುವ ಎಲ್ಲಾ ಅರ್ಹತೆ ಇದೆ. 34 ಮಂದಿಯ ಸಂಪೂರ್ಣ ಸಂಪುಟ ಆಗಿದ್ದಲ್ಲಿ ತೊಡಕು ಉಂಟಾಗುತ್ತಿರಲಿಲ್ಲ. ತಾನು ಜಿಲ್ಲೆಯ ಉಸ್ತುವಾರಿ ಆಗಿ ಬಂದಿಲ್ಲ ಎಂದು ಸುರೇಶ್‍ಕುಮಾರ್ ಸರಕಾರದ ಮಟ್ಟಕ್ಕೆ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಬಂದಿರುವದಾಗಿ ತಿಳಿಸಿದರು.
ರಾಜ್ಯದಲ್ಲಿ ಎಲ್ಲೆಡೆ ಪ್ರವಾಹ ಪರಿಣಾಮದಿಂದ ಜನಜೀವನ ಅಸ್ತವ್ಯಸ್ತೆಗೊಂಡಿದೆ. ತಕ್ಷಣ ಪರಿಹಾರ ನೀಡುವ ನಿಟ್ಟಿನಲ್ಲಿ ಸರಕಾರ ಎಲ್ಲಾ ರೀತಿಯ ವ್ಯವಸ್ಥೆ ಕಲ್ಪಿಸುತ್ತಿದೆ. ರಾಜ್ಯದಲ್ಲಿ ಸಂತ್ರಸ್ತ ಕುಟುಂಬಗಳಿಗೆ ತಲಾ ರೂ. 10 ಸಾವಿರ ಪರಿಹಾರ ನೀಡಿದ್ದು ಈಗಾಗಲೆ ರಾಜ್ಯದಲ್ಲಿ 45 ಲಕ್ಷ ಕುಟುಂಬಗಳಿಗೆ ಪರಿಹಾರ ತಲಪಿದೆ ಎಂದರು.
ಉಳಿದಂತೆ ಮನೆ ಕಳೆದುಕೊಂಡ ಸಂತ್ರಸ್ತರಿಗೆ ರೂ. 5 ಲಕ್ಷ, ಭಾಗಶ: ಹಾನಿ ಉಂಟಾದಲ್ಲಿ ರೂ. 1 ಲಕ್ಷವನ್ನು ಕುಟುಂಬಗಳಿಗೆ
(ಮೊದಲ ಪುಟದಿಂದ) ನೀಡಲು ಸರಕಾರ ಕ್ರಮ ಕೈಗೊಂಡಿದೆ. ಮನೆ ಕಳೆದುಕೊಂಡ ಕುಟುಂಬಗಳಿಗೆ ಮುಂದಿನ 10 ತಿಂಗಳ ಅವಧಿಗೆ ಮಾಸಿಕ ರೂ 5 ಸಾವಿರವನ್ನು 11 ತಿಂಗಳವರೆಗೆ ಬಾಡಿಗೆ ರೂಪದಲ್ಲಿ ಪಾವತಿ ಮಾಡಲು ಸರಕಾರ ನಿರ್ಧರಿಸಿದೆ. ಸಂತ್ರಸ್ತರ ಎಲ್ಲಾ ಸಮಸ್ಯೆಗಳಿಗೂ ಸರಕಾರ ಕಾರ್ಯ ಯೋಜನೆ ರೂಪಿಸಲಿದೆ ಎಂದರು.
ಕೊಡಗು ಜಿಲ್ಲೆಯ ಬಗ್ಗೆ ತನಗೆ ಭಾವನಾತ್ಮಕ ಸಂಬಂಧ ಇರುವದಾಗಿ ತಿಳಿಸಿದ ಸುರೇಶ್‍ಕುಮಾರ್, ಕಳೆದ ಬಾರಿ ಜಲಪ್ರಳಯ ಸಂದರ್ಭ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿರುವ ಬಗ್ಗೆ ಸ್ಮರಿಸಿದರು.
ಕರ್ನಾಟಕ ರಾಜ್ಯ ಅಲ್ಲದೆ ದೇಶದ ವಿವಿಧ ರಾಜ್ಯಗಳಾದ ಗುಜರಾತ್, ಮಹಾರಾಷ್ಟ್ರ, ಕೇರಳ, ಒರಿಸ್ಸಾ, ಉತ್ತರಾಖಂಡ್ ರಾಜ್ಯಗಳು ಪ್ರವಾಹ ಪೀಡಿತ ರಾಜ್ಯಗಳಾಗಿದ್ದು ಕೇಂದ್ರ ಸರಕಾರ ಎಲ್ಲಾ ರಾಜ್ಯ ಗಳಿಂದಲೂ ವರದಿ ತರಿಸಿಕೊಂಡು ಪರಿಹಾರಕ್ಕೆ ಕಾರ್ಯಯೋಜನೆಗಳನ್ನು ರೂಪಿಸಿದೆ ಎಂದು ಸುರೇಶ್‍ಕುಮಾರ್ “ಶಕ್ತಿ”ಯ ಪ್ರಶ್ನೆಗೆ ಉತ್ತರಿಸಿದರು.