ಪೊನ್ನಂಪೇಟೆ, ಆ. 21: ಇಲ್ಲಿನ ಕೈಗಾರಿಕಾ ತರಬೇತಿ ಸಂಸ್ಥೆಯ ಮುಂಭಾಗ ಮುಖ್ಯ ರಸ್ತೆಯ ಬದಿಯಲ್ಲಿ ಕಸ ತುಂಬಿ ಹೋಗಿ ಗಬ್ಬೆದ್ದು ನಾರುತ್ತಿದೆ. ದನ-ಕರುಗಳು, ನಾಯಿಗಳು ಕಸದ ರಾಶಿಯಲ್ಲಿ ಆಹಾರಕ್ಕಾಗಿ ಹುಡುಕಾಡುವ ದೃಶ್ಯ ಸಾಮಾನ್ಯವಾಗಿದ್ದು, ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಕೆಲವು ಸಾರ್ವಜನಿಕರೇ ಅನಾಗರೀಕರಂತೆ ತಮ್ಮ ಮನೆಯ ಕಸವನ್ನು ವಾಹನಗಳಲ್ಲಿ ತಂದು ರಸ್ತೆ ಬದಿಯಲ್ಲಿ ಎಸೆದು ಹೋಗುತ್ತಿರುವ ಪರಿಣಾಮ ಕಸದ ರಾಶಿ ನಿರ್ಮಾಣವಾಗಿದೆ. ಪಕ್ಕದಲ್ಲೇ ಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ವಿದ್ಯಾರ್ಥಿನಿಲಯ ಇದ್ದು ರಸ್ತೆಯಲ್ಲಿ ವಿದ್ಯಾರ್ಥಿಗಳು ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಇದೆ. ಸಂಬಂಧ ಪಟ್ಟವರು ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. - ಚನ್ನನಾಯಕ