ಸಿದ್ದಾಪುರ, ಆ. 21: ಕೊಡಗಿನಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಂತ್ರಸ್ತರಾದ ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಹ್ಯ ಗ್ರಾಮದ 132 ಕುಟುಂಬಗಳಿಗೆ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಟ್ರೈನ್ ಮೇಟ್ಸ್ (ಟಿ.ಎಂ.) ಚಾರಿಟೆಬಲ್ ಟ್ರಸ್ಟ್ ವತಿಯಿಂದ ಗುಹ್ಯ ನೂರುಲ್ ಇಸ್ಲಾಂ ಮಸೀದಿಯ ಆವರಣದಲ್ಲಿ ಅಂದಾಜು ರೂ. 5 ಲಕ್ಷ ಮೊತ್ತದ ಬೆಡ್, ಪಾತ್ರೆ, ಚಾಪೆ, ಬಟ್ಟೆ ಸೇರಿದಂತೆ ಮನೆಗೆ ಬೇಕಾದ ಸಾಮಗ್ರಿಗಳನ್ನು ವಿತರಿಸಲಾಯಿತು. ಟಿ.ಎಂ. ಸಂಸ್ಥೆಯ ಪ್ರಮುಖರಾದ ಖಲೀಲ್ ಹುದವಿ ಅವರು ಮಸೀದಿಯ ಅಧ್ಯಕ್ಷ ಸಿ.ಎಂ. ಮುಸ್ತಫ ಅವರಿಗೆ ಪರಿಹಾರದ ಕಿಟ್ಗಳನ್ನು ಹಸ್ತಾಂತರಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಂತ್ರಸ್ತರಿಗೆ ಶಾಶ್ವತ ಸೂರಿನ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಟಿ.ಎಂ. ಸಂಸ್ಥೆಯು ಸಹಕಾರ ನೀಡುವದಾಗಿ ತಿಳಿಸಿದರು.
ಈ ಸಂದರ್ಭ ಸಂಸ್ಥೆಯ ಪ್ರಮುಖರಾದ ಅಬಿ ಕುಟ್ಟಿಯಾನ್, ಖತೀಬ್ ಶಿಹಾಬುದ್ದೀನ್ ಲತೀಫ್, ಸಾಮಾಜಿಕ ಕಾರ್ಯಕರ್ತರಾದ ವಿ.ಕೆ. ಬಶೀರ್, ಎ.ಎಸ್. ಮುಸ್ತಫ, ಪ್ರಮುಖರಾದ ಮುನೀರ್ ಕೈಮ, ಶಾಫಿ ಚಂಗಳ, ಮುಹಮ್ಮದ್ ಶಬೀಬ್, ಶಫೀಕ್ ಚೂರಿ, ಸಾದಿಕ್ ಅನ್ವರ್, ಹಬೀಬ್ ಚೆಟ್ಟುಮ್ ಕುಯ್ ಸೇರಿದಂತೆ ಇತರರು ಇದ್ದರು.