ಮಡಿಕೇರಿ, ಆ. 21 : ಕೊಡಗಿನ ಪ್ರಗತಿಯ ಹಿತದೃಷ್ಟಿಯಿಂದ ಸ್ಥಳೀಯರೆ ಜಿಲ್ಲಾ ಉಸ್ತುವಾರಿ ಸಚಿವರಾಗುವದು ಸೂಕ್ತವೆಂದು ಅಭಿಪ್ರಾಯಪಟ್ಟಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಕಳೆದ ವರ್ಷದ ಅತಿವೃಷ್ಟಿ ಸಂದರ್ಭ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಮೈತ್ರಿ ಸರ್ಕಾರ ನೀಡಿದ್ದ ನೆರವಿನ ರೂಪದಲ್ಲೆ ಈ ಬಾರಿಯೂ ಸಂತ್ರಸ್ತರಿಗೆ ಪರಿಹಾರದ ಮೊತ್ತವನ್ನು ವಿತರಿಸಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಬಾರಿಯೂ ಅತಿವೃಷ್ಟಿಯಿಂದ ಸಾವು, ನೋವುಗಳು ಸಂಭವಿಸಿದ್ದು, ಎಲ್ಲಾ ಸಂತ್ರಸ್ತರಿಗೆ ತುರ್ತಾಗಿ ಪರಿಹಾರದ ಹಣವನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕೆಂದರು. ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಸಂಗ್ರಹವಾಗಿದ್ದ ಹಣದಲ್ಲಿ ಇನ್ನೂ 98 ಕೋಟಿ ರೂ.ಗಳು ಬಾಕಿ ಉಳಿದಿದ್ದು, ಇದನ್ನು ಕೊಡಗು ಜಿಲ್ಲೆಗೆ ವಿನಿಯೋಗಿಸಬೆÉೀಕೆಂದರು.
ರಾಜ್ಯದಲ್ಲಿ ಮೈತ್ರಿ ಸರ್ಕಾರವಿದ್ದಾಗ ಮನೆ ಕಳೆದುಕೊಂಡವರಿಗೆ ತುರ್ತಾಗಿ 1 ಲಕ್ಷ, ಮನೆಯ ಸಾಮಗ್ರಿಗಳು ಹಾನಿಗೀಡಾದವರಿಗೆ ರೂ. 50 ಸಾವಿರ ತಕ್ಷಣ ಬಿಡುಗಡೆ ಮಾಡಲಾಗಿತ್ತು. ಅಲ್ಲದೆ, 10 ಲಕ್ಷ ರೂ.ಗಳಲ್ಲಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ. ಆದರೆ, ಈ ವರ್ಷ ಸಂಭವಿಸಿದ ಮಳೆÉಹಾನಿ ಸಂತ್ರಸ್ತರಿಗೆ ಇಷ್ಟು ಮೊತ್ತದ ಪರಿಹಾರ ವಿತರಣೆಯಾಗುತ್ತಿಲ್ಲವೆಂದು ಗಣೇಶ್ ಟೀಕಿಸಿದರು.
ವೀರಾಜಪೇಟೆಯ ತೋರ ಗ್ರಾಮದಲ್ಲಿ ಗುಡ್ಡ ಕುಸಿದು ಮೃತಪಟ್ಟು ಮಣ್ಣಿನಡಿ ಸಿಲುಕಿರುವ ವ್ಯಕ್ತಿಗಳ ಸಂಬಂಧಿಗಳಿಗೆ ತಕ್ಷಣ 5 ಲಕ್ಷ ರೂ.ಗಳಂತೆ ಪರಿಹಾರದ ಚೆಕ್ ವಿತರಿಸಬೇಕು. ಹೀಗೆ ಮಾಡುವದರಿಂದ ತಮ್ಮವರನ್ನು ಮತ್ತು ತಾವಿದ್ದ ಮನೆಯನ್ನು ಕಳೆÉದುಕೊಂಡ ಕುಟುಂಬಕ್ಕೆ ಕೊಂಚ ಸಮಾಧಾನ ದೊರಕಲಿದೆ ಎಂದು ಅವರು ಅಭಿಪ್ರಾಯಪಟ್ಟರು. ಜಲಾವೃತಗೊಂಡಿದ್ದ ಪ್ರದೇಶಗಳಾದ ಬಲಮುರಿ, ಬೇತ್ರಿ, ಐಕೊಳ, ಕರಡಿಗೋಡು, ಗುಹ್ಯ, ಕೊಂಡಂಗೇರಿ ಮತ್ತಿತರ ಕಡೆಗಳ ಕುಟುಂಬಗಳನ್ನು ಸ್ಥಳಾಂತರಗೊಳಿಸಿ ಸುರಕ್ಷಿತ ಪ್ರದೇಶದಲ್ಲಿ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಬೇಕೆಂದರು. ಶೇ.50 ರಷ್ಟು ಕುಟುಂಬಗಳು ಕಳೆದ ನಾಲ್ಕೈದು ದಶಕಗಳಿಂದ ಆಶ್ರಯ ಪಡೆದಿದ್ದ ಮನೆಗಳು ಪ್ರವಾಹಕ್ಕೆ ಸಿಲುಕಿದ್ದು ಪರಿಹಾರ ವಿತರಿಸುವ ಸಂದರ್ಭ ದಾಖಲೆಗಳಿಗಾಗಿ ಒತ್ತಡ ಹೇರಬಾರದೆಂದು ಗಣೇಶ್ ಒತ್ತಾಯಿಸಿದರು.
ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಯೂಸುಫ್ ಮಾತನಾಡಿ, ಸಂತ್ರಸ್ತರಿಗೆ ನೀಡಲಾಗುತ್ತಿರುವ ತಲಾ 10 ಸಾವಿರ ರೂ.ಗಳ ಚೆಕ್‍ಗಳಲ್ಲಿ ಫಲಾನುಭವಿಗಳ ಹೆಸರು ಸರಿಯಾಗಿ ನಮೂದಿಸಲ್ಪಡದೆ ಬ್ಯಾಂಕ್‍ಗಳಲ್ಲಿ ಹಣ ಡ್ರಾ ಮಾಡಲು ಅಡಚಣೆ ಉಂಟಾಗಿದೆ. ಬ್ಯಾಂಕ್ ಅಧಿಕಾರಿಗಳು ಆಧಾರ್ ಕಾರ್ಡ್ ತರುವಂತೆ ಸಂತ್ರಸ್ತ ಫಲಾನುಭವಿಗಳಿಗೆ ಒತ್ತಡ ಹೇರುತ್ತಿದ್ದು, ಇದರಿಂದ ಅರ್ಹರು ಪರಿಹಾರದಿಂದ ವಂಚಿತರಾಗುವ ಸಾಧ್ಯತೆಗಳಿದೆ. ಆದ್ದರಿಂದ ಕಂದಾಯ ಅಧಿಕಾರಿಗಳು ಪರಿಹಾರದ ಚೆಕ್‍ಗಳನ್ನು ಸಮರ್ಪಕವಾಗಿ ನೀಡಬೇಕೆಂದು ಒತ್ತಾಯಿಸಿದರು.
ಅರ್ಹ ಫಲಾನುಭವಿಗಳು ಪರಿಹಾರದಿಂದ ವಂಚಿತರಾಗುವುದನ್ನು ತಪ್ಪಿಸಲು ಅತಿವೃಷ್ಟಿ ಹಾನಿಗೀಡಾಗಿರುವ ಮನೆ ಮತ್ತು ಆಸ್ತಿಯನ್ನು ಮೂರು ಬಾರಿ ಸರ್ವೇಗೆ ಒಳಪಡಿಸಿ ಪರಿಹಾರ ವಿತರಣೆÉಗೆ ಕ್ರಮ ಕೈಗೊಳ್ಳಬೆÉೀಕೆಂದರು.
ಸುದ್ದಿಗೋಷ್ಠಿಯಲ್ಲಿ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ, ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಸಾದಿಕ್, ಜಿಲ್ಲಾ ಜೆಡಿಎಸ್ ಉಪಾಧ್ಯಕ್ಷ ಶಿವದಾಸ್ ಹಾಗೂ ವೀರಾಜಪೇಟೆ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಯಮುನಾ ಉಪಸ್ಥಿತರಿದ್ದರು.