ಮಡಿಕೇರಿ, ಆ. 21: ಶನಿವಾರಸಂತೆ ವಲಯ ವ್ಯಾಪ್ತಿಯ ಕೊಡ್ಲಿಪೇಟೆ ಉಪವಲಯದ ಮೇ|| ತಾಜಾಲಿಯತ್ ಸಾಮಿಲ್ಲಿನಲ್ಲಿ ಅಕ್ರಮವಾಗಿ ರಹದಾರಿ ಇಲ್ಲದೆ ವಿವಿಧ ಜಾತಿಯ ಮರಗಳನ್ನು ದಾಸ್ತಾನು ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದರಿ ಸಾಮಿಲ್‍ನ ಪರವಾನಗಿಯನ್ನು ರದ್ದುಗೊಳಿಸಿ ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ದೂರಿನಂತೆ ತಾ. 29.6.2019 ರಂದು ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ಶನಿವಾರಸಂತೆ ಆರ್‍ಎಫ್‍ಓ ಹಾಗೂ ಸಿಬ್ಬಂದಿಗಳು ಪರಿಶೀಲಿಸಿ ಅಕ್ರಮ ದಾಸ್ತಾನಿನ ಕುರಿತು ಅರಣ್ಯ ಕಾಯಿದೆಯಂತೆ ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ದಾಖಲಾಗಿದ್ದ ಪ್ರಕರಣದಂತೆ ಮುಂದಿನ ಕ್ರಮದ ಕುರಿತಾಗಿ ಕಾವೇರಿ ಸೇನೆಯ ಸಂಚಾಲಕ ಕೆ.ಎ. ರವಿಚಂಗಪ್ಪ ಅವರು ಜುಲೈ 14 ರಂದು ಮಾಹಿತಿ ಹಕ್ಕು ಪ್ರಕಾರ ವಿವರ ಬಯಸಿದ್ದರು. ಈ ಬಗ್ಗೆ ರವಿಚಂಗಪ್ಪ ಅವರಿಗೆ ಉಪ ಅರಣ್ಯ ಸಂರಕ್ಷಾಣಾಧಿಕಾರಿಗಳ ಕಚೇರಿಯಿಂದ ಉತ್ತರ ನೀಡಲಾಗಿದ್ದು, ದೊಡ್ಡಕುಂದ ಗ್ರಾಮದಲ್ಲಿದ್ದ ತಾಜಲಿಯತ್ ಸಾಮಿಲ್‍ನ ಪರವಾನಗಿಯನ್ನು ಮುಂದಿನ ಆದೇಶದವರೆಗೆ ರದ್ದುಪಡಿಸಿರುವದಾಗಿ ಮಾಹಿತಿ ನೀಡಲಾಗಿದೆ.