ಬೆಂಗಳೂರು, ಆ. 20: ಇದೇ ಜುಲೈ 26 ರಂದು ಅಸ್ತಿತ್ವಕ್ಕೆ ಬಂದ ಮುಖ್ಯಮಂತ್ರಿ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರ ನೇತೃತ್ವದ ಏಕ ವ್ಯಕ್ತಿ ಸರ್ಕಾರಕ್ಕೆ 25 ದಿನಗಳ ನಂತರ 17 ಮಂದಿ ಸೇರ್ಪಡೆಯಾಗುವದರೊಂದಿಗೆ ರಾಜ್ಯ ಸಚಿವ ಸಂಪುಟ ಮೊದಲ ಬಾರಿಗೆ ವಿಸ್ತರಣೆಯಾಗಿದೆ. ಇದರಿಂದ ರಾಜ್ಯ ಸಚಿವ ಸಂಪುಟದ ಸಂಖ್ಯಾಬಲ 18 ಕ್ಕೆ ಏರಿದೆ. ಮುಧೋಳ ಕ್ಷೇತ್ರದ ಶಾಸಕ, ಗೋವಿಂದ ಮಕ್ತಪ್ಪ ಕಾರಜೋಳ, ಮಲ್ಲೇಶ್ವರಂನ ಡಾ. ಸಿ.ಎನ್. ಅಶ್ವಥ ನಾರಾಯಣ್, ಅಥಣಿ ಕ್ಷೇತ್ರದ ಮಾಜಿ ಶಾಸಕ ಲಕ್ಷ್ಮಣ್ ಸಂಗಪ್ಪ ಸವದಿ, ಶಿವಮೊಗ್ಗ ನಗರದ ಶಾಸಕ ಕೆ ಎಸ್ ಈಶ್ವರಪ್ಪ, ಪದ್ಮನಾಭನಗರದ ಶಾಸಕ ಆರ್. ಅಶೋಕ್, ಹುಬ್ಬಳ್ಳಿ-ಧಾರವಾಡ ಕೇಂದ್ರೀಯ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್, ಮೊಳಕಾಲ್ಮೋರು ಕ್ಷೇತ್ರದ ಬಿ. ಶ್ರೀರಾಮುಲು, ರಾಜಾಜಿನಗರ ಕ್ಷೇತ್ರದ ಶಾಸಕ ಎಸ್. ಸುರೇಶ್ ಕುಮಾರ್, ಗೋವಿಂದರಾಜ ನಗರ ಕ್ಷೇತ್ರದ ಶಾಸಕ ವಿ ಸೋಮಣ್ಣ, ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ. ಟಿ. ರವಿ, ಶಿಗ್ಗಾಂವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ, ರಾಜ್ಯ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಚಿಕ್ಕನಾಯಕನಹಳ್ಳಿ ಕ್ಷೇತ್ರದ
(ಮೊದಲ ಪುಟದಿಂದ) ಶಾಸಕ ಜೆ ಸಿ ಮಾಧುಸ್ವಾಮಿ, ನಗರಗುಂದ ಕ್ಷೇತ್ರದ ಶಾಸಕ ಚಂದ್ರಕಾತ ಗೌಡ ಚನ್ನಪ್ಪಗೌಡ ಪಾಟೀಲ್, ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್. ನಾಗೇಶ್, ಔರಾದ್ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಹಾಗೂ ನಿಪ್ಪಾಣಿ ಕ್ಷೇತ್ರದ ಶಾಸಕಿ ಶಶಿಕಲಾ ಅಣ್ಣಾ ಸಾಹೇಬ್ ಜೊಲ್ಲೆ ಅವರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ವಿಶೇಷ ಹಾಗೂ ಕಿಕ್ಕಿರಿದ ಸಮಾರಂಭದಲ್ಲಿ ಸಂಪುಟ ದರ್ಜೆ ಸಚಿವರಾಗಿ ಇಲ್ಲಿ ಇಂದು ಪ್ರಮಾಣ ವಚನ ಸ್ವೀಕರಿಸಿದರು.
ರಾಜ್ಯಪಾಲ ವಜುಭಾಯಿ ರುಢಾಭಾಯಿ ವಾಲಾ ಅವರು ಎಲ್ಲಾ ಹದಿನೇಳು ಸಚಿವರಿಗೆ ಅಧಿಕಾರಪದ ಮತ್ತು ಗೋಪ್ಯತಾ ಪ್ರಮಾಣ ವಚನ ಬೋಧಿಸಿದರು. ಬೆಳಿಗ್ಗೆ 10-30 ಗಂಟೆಗೆ ಪ್ರಾರಂಭವಾದ ಈ ಸಮಾರಂಭವು ಸುಮಾರು ಐವತ್ತು ನಿಮಿಷಗಳ ಕಾಲ ನಡೆಯಿತು.
ಕಾರ್ಯಕ್ರಮದ ವಿಶೇಷತೆಗಳು : ಎಲ್ಲಾ ಹದಿನೇಳು ಸಚಿವರೂ ಕನ್ನಡ ಭಾಷೆಯಲ್ಲಿ ಹಾಗೂ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ಒಂದು ವಿಶೇಷವಾಗಿತ್ತು. ಅಲ್ಲದೆ, ಪ್ರಭು ಚೌಹಾಣ್ ಅವರು ತಮ್ಮ ಸಾಂಪ್ರದಾಯಿಕ ಲಂಬಾಣಿ ಉಡುಗೆ ತೊಡುಗೆಯೊಂದಿಗೆ ನೋಡುಗರನ್ನು ಆಕರ್ಷಿಸಿದರು. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ ಎಸ್ ಈಶ್ವರಪ್ಪ ಮತ್ತು ಆರ್ ಅಶೋಕ್ ಹಾಗೂ ಮೇಲ್ಮನೆ ಅಥವಾ ಕೆಳಮನೆ ಸದಸ್ಯರೂ ಅಲ್ಲದ ಲಕ್ಷ್ಮಣ ಸವದಿ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ ಎಲ್ಲರ ಗಮನ ಸೆಳೆದರು.
ಸಂಸದರು ಹಾಗೂ ಶಾಸಕರೂ ಸೇರಿದಂತೆ ಹಲವು ಗಣ್ಯರು, ಭಾರತೀಯ ಜನತಾ ಪಕ್ಷದ ಕಾರ್ಯ ಕರ್ತರು ಮತ್ತು ಅಭಿಮಾನಿಗಳು ಈ ಸಮಾರಂಭಕ್ಕೆ ಸಾಕ್ಷಿಯಾಗಿದ್ದರು.
ರಾಜ್ಯದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ ಭಾಸ್ಕರ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ನಿರ್ವಹಿಸಿದರು. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ವಿ ಆರ್ ರಮೇಶ್,ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿಯೂ ಆಗಿರುವ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಿಷ್ಠಾಚಾರ ವಿಭಾಗದ ಉಪ ಕಾರ್ಯದರ್ಶಿ ಹಾಗೂ ರಾಜ್ಯ ಆತಿಥೇಯ ಸಂಸ್ಥೆಯ ನಿರ್ದೇಶಕ ವಿಜಯ್ ಮಹಾಂತೇಶ್ ದಾನಮ್ಮನವರ್ ಅವರೂ ಒಳಗೊಂಡಂತೆ ಹಿರಿಯ ಅಧಿಕಾರಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.