ಕೂಡಿಗೆ, ಆ. 20: ದಿಡ್ಡಳ್ಳಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳುವ ಬಗ್ಗೆ ಪಟ್ಟು ಹಿಡಿದು ರಾಜ್ಯ ಮಟ್ಟದಲ್ಲೆ ಸುದ್ದಿ ಮಾಡಿದ್ದ ದಿಡ್ಡಳ್ಳಿ ನಿವಾಸಿಗಳ ಜಿಲ್ಲಾ ಮಟ್ಟದ ಹೋರಾಟದ ಫಲವಾಗಿ ಮೂರು ವರ್ಷಗಳ ನಂತರ ಸೋಮವಾರಪೇಟೆ ತಾಲ್ಲೂಕಿನ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಗ್ರಾಮಗಳಲ್ಲಿ ದಿಡ್ಡಳ್ಳಿ ನಿರಾಶ್ರಿತ ಪುನರ್ವಸತಿ ಕೇಂದ್ರವನ್ನಾಗಿಸಿ 528 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ದಿಡ್ಡಳ್ಳಿ ಹೋರಾಟ ದೊಡ್ಡ ಮಟ್ಟದಲ್ಲಿ ನಡೆದ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ದಿಡ್ಡಳ್ಳಿ ಆದಿವಾಸಿಗಳ ಹೋರಾಟಕ್ಕೆ ಮಣಿದು, ಅಂದಿನ ರಾಜ್ಯ ಸರ್ಕಾರದ ಅಧಿವೇಶನದಲ್ಲಿ ಚರ್ಚೆಗೊಂಡು ರಾಜ್ಯ ಮಟ್ಟದ ಸಮಿತಿಯನ್ನು
(ಮೊದಲ ಪುಟದಿಂದ) ರಚಿಸಿ, ವರದಿಯನ್ನು ಪಡೆದುಕೊಂಡು ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಬಸವನಹಳ್ಳಿ ಮತ್ತು ಕೂಡಿಗೆ ಗ್ರಾ.ಪಂ.ನ ಬ್ಯಾಡಗೊಟ್ಟ ಗ್ರಾಮಗಳಲ್ಲಿ ದಿಡ್ಡಳ್ಳಿ ನಿರಾಶ್ರಿತರಿಗೆ ಮನೆಯನ್ನು ನಿರ್ಮಾಣ ಮಾಡಲು ನಿರ್ಣಯ ಕೈಗೊಂಡಿತು. ಸಮಿತಿಯವರು ಎರಡು ಗ್ರಾಮಗಳಲ್ಲಿ ಸ್ಥಳ ಪರಿಶೀಲಿಸಿ, ಗುರುತಿಸಿ, ಬಸವನಹಳ್ಳಿ ಯಲ್ಲಿ 180, ಬ್ಯಾಡಗೊಟ್ಟದಲ್ಲಿ 348 ಮನೆಗಳನ್ನು ನಿರ್ಮಿಸಲು ಮುಂದಾಗಿತ್ತು.
ದಿಡ್ಡಳ್ಳಿ ಹೋರಾಟಗಾರರು ದಿಡ್ಡಳ್ಳಿಯಲ್ಲಿಯೇ ಮನೆ ನಿರ್ಮಿಸಿ ಕೊಡುವಂತೆ ಹೋರಾಟ ನಡೆಸಿದರೂ, ಮೀಸಲು ಅರಣ್ಯ ಪ್ರದೇಶಕ್ಕೆ ಅನಧಿಕೃತವಾಗಿ ಪ್ರವೇಶಿಸಿ, ಮನೆ ನಿರ್ಮಿಸಿಕೊಡುವಂತೆ ಪಟ್ಟು ಹಿಡಿದರೂ ಸರ್ಕಾರ ಮೀಸಲು ಅರಣ್ಯ ಪ್ರದೇಶದಲ್ಲಿ ಮನೆ ನಿರ್ಮಾಣ ಮಾಡಲು ಒಪ್ಪದೆ ಸರ್ಕಾರ ಮತ್ತು ಅರಣ್ಯ ಇಲಾಖೆ ಅಲ್ಲಿಂದ ಹೋರಾಟಗಾರರನ್ನು ಒಕ್ಕಲೆಬ್ಬಿಸಿ, ಸೋಮವಾರಪೇಟೆ ತಾಲ್ಲೂಕಿನ ಎರಡು ಗ್ರಾಮಗಳಲ್ಲಿ ಖಾಲಿ ಇದ್ದ ಸರ್ಕಾರಿ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಡುವಂತೆ ತೀರ್ಮಾನ ಕೈಗೊಂಡಿತು.
ಅದರಂತೆ ರಾಜ್ಯ ಮಟ್ಟದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಟೆಂಡರ್ ಪ್ರಕ್ರಿಯೆ ನಡೆದು, ಒಂದು ಮನೆಗೆ 3.5 ಲಕ್ಷ ದಿಂದ ರೂ 4 ಲಕ್ಷದವರೆಗೆ ಪೂರ್ಣವಾಗಿ ವ್ಯವಸ್ಥಿತ ಮನೆಯನ್ನು ನಿರ್ಮಾಣ ಮಾಡಿಕೊಡುವ ತೀರ್ಮಾನದಂತೆ ನಿರ್ಮಿತಿ ಕೇಂದ್ರ ಇದರ ಟೆಂಡರ್ ಪ್ರಕ್ರಿಯೆಯನ್ನು ಪಡೆದು ಮನೆ ನಿರ್ಮಿಸಿಕೊಳ್ಳಲು ತೊಡಗಿತು. ನಿರ್ಮಿತಿ ಕೇಂದ್ರದ ನಿಯಮಾನುಸಾರ ಬಸವನಹಳ್ಳಿ ಮತ್ತು ಬ್ಯಾಡಗೊಟ್ಟ ಗ್ರಾ.ಪಂ. ವ್ಯಾಪ್ತಿಯಲ್ಲಿ ಮನೆ ನಿರ್ಮಾಣದ ಉಪ ಗುತ್ತಿಗೆದಾರರು ಟೆಂಡರ್ ಪಡೆದು ಮನೆ ನಿರ್ಮಾಣದ ಕಾಮಗಾರಿಯಲ್ಲಿ ತೊಡಗಿದರು.
ಇದರಂತೆ ರಾಜ್ಯ ಸರ್ಕಾರ ಹೆಚ್ಚು ಈ ದಿಡ್ಡಳ್ಳಿ ಪುನರ್ವಸತಿ ಕೇಂದ್ರದ ಆದಿವಾಸಿಗಳಿಗೆ ಮನೆ ನಿರ್ಮಿಸಿ ಕೊಡುವ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಆದಿವಾಸಿಗಳ ತಾತ್ಕಾಲಿಕ ಶೆಡ್ನಲ್ಲಿ ವಾಸ್ತವ್ಯ ಹೂಡಿ ಸಮಸ್ಯೆಗಳನ್ನು ತಿಳಿದು, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿ ಸರ್ಕಾರದ ಮುಖೇನ ಸಮಾಜ ಕಲ್ಯಾಣ ಇಲಾಖೆಗೆ ಹಣ ಪಾವತಿಯಾಗಿ ಅದರನ್ವಯ ವಿವಿಧ ಹಂತಗಳಲ್ಲಿ ವಿವಿಧ ಇಲಾಖೆಗಳ ಮೂಲಕ ಕಾಮಗಾರಿ ಪ್ರಗತಿಯಲ್ಲಿ ಸಾಗಿತು. ಈಗಾಗಲೇ 528 ಕುಟುಂಗಳಿಗೆ ರಾಜ್ಯ ಸರ್ಕಾರ ರೂ.22 ಕೋಟಿ ಹಣ ಬಿಡುಗಡೆ ಮಾಡಿ, ರಸ್ತೆ, ಕುಡಿಯುವ ನೀರಿ ವ್ಯವಸ್ಥೆಗೆ ಹೈ ವಾಟರ್ ಟ್ಯಾಂಕ್ ನಿರ್ಮಾಣ, ಶೌಚಾಲಯ, ವಿದ್ಯುತ್ ಸರಬರಾಜು, ಒಳಚರಂಡಿ ವ್ಯವಸ್ಥೆ ಸೇರಿದಂತೆ ಸುಸಜ್ಜಿತವಾಗಿ ಮನೆಗಳ ನಿರ್ಮಾಣ ಕಾಮಗಾರಿಯು ನಡೆದು, ಪೂರ್ಣಗೊಳ್ಳುತ್ತಿದೆ.
ನಿರ್ಮಿತಿ ಕೇಂದ್ರ, ಗಿರಿಜನ ಅಭಿವೃದ್ಧಿ ಯೋಜನಾ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಭೂ ಸೇನಾ ನಿಗಮ, ಜಿಲ್ಲಾಡಳಿತ, ಸ್ಥಳೀಯ ಗ್ರಾ.ಪಂ.ಗಳು ಸರ್ಕಾರದ ಸೂಚನೆ ಯಂತೆ ಜಿಲ್ಲಾಧಿಕಾರಿಗಳ ಆದೇಶದನ್ವಯ ಮನೆ ನಿರ್ಮಾಣದ ಕಾಮಗಾರಿಯನ್ನು ಹಂತ ಹಂತವಾಗಿ ನಡೆಸಿ ಯಶಸ್ವಿಯಾಗಿ, ಫಲಾನು ಭವಿಗಳ ವಾಸಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ನಿರ್ಮಿತಿ ಕೇಂದ್ರದ ವತಿಯಿಂದ ಪ್ರತಿ ಮನೆಗಳಿಗೆ ಟೈಲ್ಸ್ ಅಳವಡಿಕೆ, ನೂತನ ಮಾದರಿಯಲ್ಲಿ ಮನೆ ನಿರ್ಮಾಣ ಮಾಡಿಕೊಡುವ ದರಲ್ಲಿ ಯಶಸ್ವಿಯಾಗಿದ್ದಾರೆ. ಈ ಕಾಮಗಾರಿಯನ್ನು ಹಂತ ಹಂತ ದಲ್ಲಿಯೂ ಇಲಾಖೆಯ ಅಧಿಕಾರಿ ಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅತ್ಯುತ್ತಮವಾದ ಮನೆಗಳ ಕಾಮಗಾರಿ ಯನ್ನು ಪೂರ್ಣಗೊಳಿಸಿದ್ದಾರೆ.
ಈಗಾಗಲೇ ರಾಜ್ಯದ ಮುಖ್ಯ ಮಂತ್ರಿಗಳು ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ಬಸವನಹಳ್ಳಿ ಯಲ್ಲಿ ನಡೆದ ಸಮಾರಂಭದಲ್ಲಿ ಮನೆಗಳ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಆದರೆ, ಇದೀಗ ಮನೆಗಳ ಹಸ್ತಾಂತರ ಕಾರ್ಯವು ಮುಗಿದಿದ್ದು, ಇನ್ನುಳಿದ 10 ಭಾಗದಷ್ಟು ಕಾಮಗಾರಿ ಯಲ್ಲಿ ತಾತ್ಕಾಲಿಕ ಶೆಡ್ನಲ್ಲಿದ್ದ ಕೆಲವು ಮನೆ, ಉದ್ಯಾನವನ, ಅಂಗನವಾಡಿ ಕಟ್ಟಡ ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಆಗಬೇಕಾಗಿವೆ. ಅವುಗಳ ಕಾಮಗಾರಿಗಳನ್ನು ಪೂರ್ಣಗೊಳಿಸು ವದರಲ್ಲಿ ಸಂಬಂಧಪಟ್ಟ ಇಲಾಖೆ ಯವರು ತಲ್ಲೀನರಾಗಿರುವದು ಕಂಡುಬರುತ್ತಿದೆ. ಅಂತು ದಿಡ್ಡಳ್ಳಿ ನಿರಾಶ್ರಿತರಿಗೆ ಪುನರ್ವಸತಿಗಳನ್ನು ನಿರ್ಮಿಸಿಕೊಡುವಲ್ಲಿ ಸರ್ಕಾರ ಕೈಗೊಂಡ ಯೋಜನೆಗಳು ಮತ್ತು ಇಲಾಖೆಯ ಅಧಿಕಾರಿಗಳ, ಜಿಲ್ಲಾಡಳಿತದ ಶ್ರಮದಿಂದ ಪೂರ್ಣ ಯಶಸ್ಸು ಕಂಡಿದೆ.