ನವದೆಹಲಿ, ಆಗಸ್ಟ್ 21: ಐಎನ್‍ಎಕ್ಸ್ ಮೀಡಿಯಾ ಹಗರಣಕ್ಕೆ ಸಂಬಂಧಿಸಿದಂತೆ ಸಂಕಷ್ಟಕ್ಕೆ ಸಿಲುಕಿರುವ ಕೇಂದ್ರ ಸಚಿವ ಪಿ. ಚಿದಂಬರಂ ಅವರನ್ನು ಬಂಧಿಸಲಾಗಿದೆ.

ಚಿದಂಬರಂ ಅವರ ನಿವಾಸದ ಮೇಲೆ ಸಿಬಿಐ ಹಾಗೂ ಇಡಿ ಅಧಿಕಾರಿಗಳು ಸೇರಿದಂತೆ 20 ಪೊಲೀಸ್ ಅಧಿಕಾರಿಗಳ ತಂಡ ದಾಳಿ ಮಾಡಿ ಅವರ ಮನೆಯಲ್ಲಿಯೇ ಬಂಧಿಸಿದ್ದಾರೆ.ನಿನ್ನೆ ಚಿದಂಬರಂ ಅವರ ಮನೆಗೆ ತೆರಳಿದ ಅಧಿಕಾರಿಗಳು ಬಂಧನದ ವಾರೆಂಟ್ ನೀಡಲು ಮುಂದಾಗಿದ್ದು, ಆ ಸಂದರ್ಭದಲ್ಲಿ ಚಿದಂಬರಂ ಅವರು ಇಲ್ಲದ ಕಾರಣ ಅವರ ಮನೆಗೆ ಬಂಧನದ ವಾರೆಂಟ್ ನೋಟೀಸ್ ಅಂಟಿಸಿ ವಾಪಸ್ ಆಗಿದ್ದರು. ಇಂದು ಮತ್ತೆ ಅಧಿಕಾರಿಗಳು ತೆರಳಿದ ಸಂದರ್ಭ ಚಿದಂಬರಂ ಅವರು ಮನೆಯಲ್ಲಿಯೇ ಇದ್ದರಾದರೂ ಹೊರ ಬರಲಿಲ್ಲ. ರಾತ್ರಿ 8 ಗಂಟೆ ವೇಳೆಗೆ ಅಧಿಕಾರಿಗಳು ಮನೆಗೆ ತೆರಳಿದ್ದರಾದರೂ 9.30ರ ತನಕ ನಾಟಕೀಯ ಬೆಳವಣಿಗೆ ನಡೆದಿದ್ದು, ಕೊನೆಗೂ ಅಧಿಕಾರಿಗಳು ಮನೆಯ ಕಾಂಪೌಂಡ್ ಹಾರಿ ಒಳಕ್ಕೆ ತೆರಳಿ ಚಿದಂಬರಂ ಅವರನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಚಿದಂಬರಂ ಅವರನ್ನು ಸಿಬಿಐ ಕೇಂದ್ರ ಕಚೇರಿಗೆ ವಿಚಾರಣೆಗೆ ಕರೆದೊಯ್ಯಲಾಗಿದ್ದು, ವಿಚಾರಣೆ ನಡೆಯುತ್ತಿದೆ.