ಭಾಗಮಂಡಲ, ಆ. 22: ತಲಕಾವೇರಿ-ಹುಣಸೂರು ಹೆದ್ದಾರಿಯ ಕೋರಂಗಾಲದ ಬಳಿ ಹೊಸದಾಗಿ ನಿರ್ಮಿಸಿದ ಸೇತುವೆ ಮೂಲಕ ಸಂಪರ್ಕ ಕಷ್ಟಕರವಾಗುತ್ತಿದೆ. ಸೇತುವೆಯ ದುಸ್ಥಿತಿಯಿಂದಾಗಿ ವಾಹನ ಚಾಲಕರು ಪರದಾಡುವಂತಾಗಿದೆ. ಭಾಗಮಂಡಲದಿಂದ 3 ಕಿ.ಮೀ ಅಂತರದ ಕೋರಂಗಾಲದಲ್ಲಿ ಕಳೆದ ಮಾರ್ಚ್ ತಿಂಗಳಲ್ಲಿ ಸೇತುವೆ ಒಂದನ್ನು ನಿರ್ಮಿಸಿದ್ದು ಸೇತುವೆಯ ಎರಡೂ ಬದಿ ಮಣ್ಣಿನ ದಂಡೆಗಳನ್ನು ಮಾಡಿ ವಾಹನ ಸಂಚಾರಕ್ಕೆ ಜೂನ್ ಮೊದಲ ವಾರದಿಂದ ಅವಕಾಶ ಕಲ್ಪಿಸಲಾಗಿತ್ತು. ರಸ್ತೆಗೆ ಹಾಕಿದ ಮಣ್ಣು ಕೆಸರಿನಿಂದ ತುಂಬಿದ್ದು ಮಧ್ಯದಲ್ಲಿ ದೊಡ್ಡದೊಡ್ಡ ಗುಂಡಿಗಳಾಗಿದ್ದು ಕೆಸರಿನಿಂದ ತುಂಬಿದ ರಸ್ತೆಯಲ್ಲಿ ಲಘು ವಾಹನ ಸಂಚಾರ ಹೋಗಲಿ ದೊಡ್ಡ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ನಿನ್ನೆ ಬೆಳಿಗ್ಗೆ ಬಸ್ಸೊಂದು ಕೆಸರಿನ ರಸ್ತೆಯಲ್ಲಿ ಸಂಚರಿಸಲಾಗದೆ ಬಸ್ಸಿನಲ್ಲಿದ್ದ ಚಾಲಕ, ನಿರ್ವಾಹಕರು ಹೊಂಡಕ್ಕೆ ಕಲ್ಲುತುಂಬಿ ಬಳಿಕ ಬಸ್ ಸಂಚರಿಸುವಂತಾಯಿತು. ಈ ಬಾರಿಯ ಪ್ರವಾಹಕ್ಕೆ ವಾರಗಟ್ಟಲೆ ಸೇತುವೆ ಮುಳುಗಿದ್ದು ಅವೈಜ್ಞಾನಿಕವಾಗಿ ದಂಡೆಗಳನ್ನು ನಿರ್ಮಿಸಿದ್ದು ರಸ್ತೆ ಬದಿ ಕುಸಿಯುತ್ತಿರುವ ಬರೆಯಿಂದ ಮಣ್ಣು ಸೇತುವೆಯ ಒಂದು ಬದಿಯ ದಂಡೆಯ ಮೇಲೆ ಕೆಸರಿನಿಂದ ಹರಿದುಬರುತ್ತಿದ್ದು ಪಕ್ಕದ ಮೋರಿಯು ಕೂಡ ಮಣ್ಣಿನಿಂದ ಮುಚ್ಚಲ್ಪಟ್ಟಿದೆ. ಹರಿದು ಬಂದ ನೀರು ರಸ್ತೆಯ ಮೇಲೆ ನಿಲ್ಲುತ್ತಿದೆ. ಈ ರಸ್ತೆಯಲ್ಲಿ ಸಾಗುವ ಪ್ರಯಾಣಿಕರು ತೀರಾ ಸಂಕಷ್ಟಕ್ಕೆ ಸಿಲುಕಿದ್ದು ಕೂಡಲೇ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದೆ. ತಪ್ಪಿದಲ್ಲಿ ಮುಂದಿನ ಸೋಮವಾರ ರಸ್ತೆ ಹೊಂಡಗಳಲ್ಲಿ ಬಾಳೆಗಿಡ ನಾಟಿ ಮಾಡಿ ಪ್ರತಿಭಟನೆ ಮಾಡುವದಾಗಿ ಸ್ಥಳೀಯರು, ವಾಹನ ಚಾಲಕರು ಎಚ್ಚರಿಸಿದ್ದಾರೆ. - ಸುನಿಲ್ ಕೆ.ಡಿ.