ನಾಪೋಕ್ಲು, ಆ. 20: ಸಮೀಪದ ಚೆಯ್ಯಂಡಾಣೆ, ನರಿಯಂದಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಬಿರುಸಿನ ಮಳೆಯಿಂದ ಉಂಟಾದ ರಸ್ತೆ, ಸೇತುವೆ ಹಾನಿ, ಗುಡ್ಡಕುಸಿತ, ಮನೆ ಮತ್ತು ಇತರ ಆಸ್ತಿಪಾಸ್ತಿಗಳ ಹಾನಿ ಕುರಿತು ಶಾಸಕ ಕೆ.ಜಿ.ಬೋಪಯ್ಯ ಪರಿಶೀಲನೆ ನಡೆಸಿದರು. ಈ ಸಂದರ್ಭ ನರಿಯಂದಡ ಗ್ರಾಮದ ಬಿಜೆಪಿ ಸ್ಥಾನಿಯ ಸಮಿತಿ ಅಧ್ಯಕ್ಷ ಪೊಕ್ಕುಳಂಡ್ರ ಧನೋಜ್ ಅವರ ನೇತೃತ್ವದಲ್ಲಿ ಪೊಕ್ಕುಳಂಡ್ರ, ಬಿಳಿಯಂಡ್ರ, ಮಂಞಪುರ, ತೋಟಂಬೈಲು, ಮಕ್ಕಿಮನೆ, ಕುಟುಂಬಗಳಿಗೆ ಸಂಬಂಧಿಸಿದ ಕಾಫಿ ತೋಟಗಳಿಗೆ ನಿರಂತರವಾಗಿ ಆನೆಗಳು ಧಾಳಿ ಮಾಡುತ್ತಿವೆ. ಧಾಳಿಯಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು. ಹಾಗೂ ಆನೆಗಳನ್ನು ಕಾಡಿಗೆ ಅಟ್ಟಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಪತ್ರವನ್ನು ನೀಡಿದರು. ಶಾಸಕರು ಸೂಕ್ತ ಕ್ರಮಕೈಗೊಳ್ಳುವ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುವದಾಗಿಯೂ ಸರ್ಕಾರದಿಂದ ನಷ್ಟ ಪರಿಹಾರ ಒದಗಿಸುವದಾಗಿಯೂ ಭರವಸೆ ನೀಡಿದರು. ಈ ಸಂದರ್ಭ ತೋಟಗಳಿಗೆ ನಷ್ಟ ಆದ ಕುಟುಂಬಗಳ ಸದಸ್ಯರು, ಗ್ರಾಮಪಂಚಾಯಿತಿ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷದ ಕಾರ್ಯಕರ್ತರು ಇದ್ದರು. -ದುಗ್ಗಳ