ಕುಶಾಲನಗರ, ಆ. 20: ಪಾಲಿಬೆಟ್ಟದಲ್ಲಿ ನಡೆದ ಗೋಹತ್ಯೆ ಪ್ರಕರಣವನ್ನು ಖಂಡಿಸಿ ಕುಶಾಲ ನಗರದ ಹಿಂದೂಪರ ಸಂಘಟನೆ ಗಳಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದು ಪರಿಷತ್ ಮತ್ತು ಭಜರಂಗದಳದ ಪ್ರಮುಖರು ಮತ್ತು ಕಾರ್ಯಕರ್ತರು ಗೋಹತ್ಯೆ ಮಾಡಿದ ದುಷ್ಕರ್ಮಿಗಳ ವಿರುದ್ಧ ಧಿಕ್ಕಾರ ಕೂಗಿದರು. ಕೂಡಲೆ ಆರೋಪಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭ ಮಾತನಾಡಿದ ಬಿಜೆಪಿ ಮುಖಂಡ ಜಿ.ಎಲ್. ನಾಗರಾಜ್, ಕೊಡಗಿನಲ್ಲಿ ಗೋಹತ್ಯೆ ನಿಷೇಧ ಕಾನೂನನ್ನು ಕಠಿಣಗೊಳಿಸ ಬೇಕಿದೆ. ಗೋಹತ್ಯೆ ಮಾಡುವ ದುರುಳರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ಪಪಂ ಸದಸ್ಯ ಅಮೃತ್ರಾಜ್ ಮಾತನಾಡಿ, ಕೇಂದ್ರ ಸರಕಾರ ಗೋಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಲು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
ಭಜರಂಗದಳ ಪ್ರಮುಖ ನವನೀತ್ ಪೊನ್ನೇಟಿ ಮಾತನಾಡಿ, ಗೋಹತ್ಯೆ ಪ್ರಕರಣವನ್ನು ಖಂಡಿಸಿ ಇಂತಹ ಕೃತ್ಯಗಳು ಮರುಕಳಿಸದಂತೆ ಜಿಲ್ಲಾಡಳಿತ ಎಚ್ಚರವಹಿಸಬೇಕೆಂದು ಹೇಳಿದರು.
ಪ್ರತಿಭಟನೆಯಲ್ಲಿ ವಿಶ್ವ ಹಿಂದು ಪರಿಷತ್ ಪ್ರಮುಖ ಸಂತೋಷ್, ಹಿಂದೂ ಜಾಗರಣ ವೇದಿಕೆಯ ಮಧು, ಹಿಂದೂಪರ ಸಂಘಟನೆಗಳ ಪ್ರಮುಖರಾದ ಮಂಜುನಾಥ್, ಹರೀಶ, ರಾಜೀವ, ವರದ, ಡಾಲು, ಅನುದೀಪ್, ಅನೀಶ್, ಎಂ.ವಿ. ನಾರಾಯಣ, ಸುಮನ್ ಮತ್ತಿತರರು ಇದ್ದರು.