ಮಡಿಕೇರಿ, ಆ. 19: ಸರ್ಕಾರ ದಿಂದ ದೊರಕುವ ನೆರವಿನೊಂದಿಗೆ ಪ್ರತಿಯೋರ್ವರೂ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದುವದು ಅಗತ್ಯವಾಗಿದ್ದು, ಇದಕ್ಕಾಗಿ ಜೀವನಶೈಲಿಯ ಬದಲಾವಣೆಯ ಅಗತ್ಯವೂ ಇದೆ. ನದಿತೀರಗಳು, ಬೆಟ್ಟದ ತಪ್ಪಲು ಬೌಗೋಳಿಕವಾಗಿ ವಾಸಿಸಲು ಎಷ್ಟು ಸುರಕ್ಷಿತ ಎಂಬ ದನ್ನು ತಿಳಿದುಕೊಂಡು ಅಸುರಕ್ಷಿತ ಸ್ಥಳದಿಂದ ತೆರಳಿ ಬೇರೆಡೆ ವಾಸಿಸು ವದು ಸೂಕ್ತ ಎಂದು ಯುನಿಸೆಫ್ ಬೆಂಬಲಿತ ಸಮಗ್ರ ಕೊಡಗು ಸ್ಪಂದನ ಯೋಜನೆಯ ಜಿಲ್ಲಾ ಅಧಿಕಾರಿ ಪ್ರಭಾತ್ ಕಲ್ಕೂರ ಹೇಳಿದ್ದಾರೆ.
ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಮರಗೋಡು ವಿನ ಭಾರತಿ ಪ.ಪೂ. ಕಾಲೇಜಿನ ನಿರಾಶ್ರಿತರಿಗಾಗಿ ಆಶ್ರಯ ಕೇಂದ್ರ ದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮ ದಲ್ಲಿ ಮಾತನಾಡಿದ ಪ್ರಭಾತ್ ಕಲ್ಕೂರ, ಅನಿಶ್ಚಿತತೆ ಮತ್ತು ಅಸ್ಥಿರತೆ ಗಳು ಜೀವನದ ಭಾಗವಾಗಿದ್ದು, ಇವುಗಳನ್ನು ಸಮರ್ಥ ಮನಸ್ಥಿತಿ ಯಲ್ಲಿ ಎದುರಿಸುವದು ಕೂಡ ಬದುಕಿನ ಭಾಗವಾಗಿದೆ. ಜೀವನದಲ್ಲಿ ಸಂಕಷ್ಟಕ್ಕೊಳಗಾದ ನಾವು ಮೊದಲು ಸುಖವಾಗಿ ದ್ದೇವಲ್ಲ ಎಂಬದನ್ನು ನೆನಪಿಸಿ ಕೊಂಡು ಮುಂದೆ ಮತ್ತೆ ಸುಖದ ದಿನಗಳು ಬರುತ್ತದೆ ಎಂಬ ನಂಬಿಕೆಯಿಂದ ಸಮಸ್ಯೆಯ ಸವಾಲನ್ನು ಎದುರಿಸಬೇಕೆಂದು ಕರೆ ನೀಡಿದರು.
ಹಿರಿಯ ಸಾಹಿತಿ, ನಾಗೇಶ್ ಕಾಲೂರು ಮಾತನಾಡಿ, ಕಳೆದ ವರ್ಷದ ಪ್ರಕೃತಿ ವಿಕೋಪದಲ್ಲಿ ತಾನೂ ಸಂತ್ರಸ್ತ ನಾಗಿದ್ದು ಪ್ರಕೃತಿ ವಿಕೋಪಕ್ಕೀಡಾಗಿದ್ದ ಕಾಲೂರು ಗ್ರಾಮಸ್ಥರಿಗೆ ಸುಮಾರು ರೂ. 65 ಲಕ್ಷಗಳ ನೆರವು ವಿವಿಧ ಸಂಘ ಸಂಸ್ಥೆಗಳಿಂದ ದೊರಕಿ ಕೇವಲ 1 ವರ್ಷದಲ್ಲಿಯೇ ಗ್ರಾಮಸ್ಥರು ಸ್ವಾವಲಂಭಿ ಜೀವನ ಕಂಡುಕೊಳ್ಳು ವಂತಾಗಿದ್ದಾರೆ ಎಂದರು.
ಕೊಡಗಿನ ವಿವಿದೆಡೆ ಸಂತ್ರಸ್ತರಾ ದವರು ತಮ್ಮದೇ ಒಂದು ಸಂಘ ರೂಪಿಸಿಕೊಂಡು ಆ ಸಂಘದ ಮೂಲಕವೇ ಪರಿಹಾರ ಪಡೆಯ ಬೇಕು. ಹಾಗಿದ್ದಾಗ ಮಾತ್ರ ದೊರಕಿದ ಪರಿಹಾರ ಸಾಮಗ್ರಿಗಳು ಸೂಕ್ತ ರೀತಿಯಲ್ಲಿ ವಿನಿಯೋಗ ವಾಗುತ್ತದೆ. ಹೆಚ್ಚಿನ ಪರಿಹಾರವನ್ನೂ ಸಂಘ ವ್ಯವಸ್ಥೆಯಲ್ಲಿ ಪಡೆಯಲು ಸಾಧ್ಯ ಎಂದೂ ನಾಗೇಶ್ ಕಾಲೂರು ಹೇಳಿದರು.
ಆಕಾಶವಾಣಿಯ ಹಿರಿಯ ಉದ್ಘೋಷಕ, ಸಾಹಿತಿ ಸುಬ್ರಾಯ ಸಂಪಾಜೆ ಮಾತನಾಡಿ, ಯಾರು ಕೂಡ ಬಯಸಿ ಸಂತ್ರಸ್ತರಾದವರಲ್ಲ, ಕಾಲಘಟ್ಟದ ಅನಿವಾರ್ಯತೆ ಹಲವರನ್ನು ನಿರಾಶ್ರಿತರನ್ನಾಗಿ ಮಾಡಿದೆ. ಯಾರಿಗೂ ಸುಖದಂತೆ ಕಷ್ಟ ಕೂಡ ಶಾಶ್ವತವಲ್ಲ ಎಂಬದನ್ನು ಅರಿತು ಕೊಂಡು ಆಶಾಭಾವನೆ ಯಿಂದ ಹೊಸ ಜೀವನ ರೂಪಿಸಲು ಮನಸ್ಸು ಮಾಡಿ ಎಂದು ಸಲಹೆ ನೀಡಿದರು.
ಮರಗೋಡು ಭಾರತಿ ಪ.ಪೂ. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಕಟ್ಟೆಮನೆ ಸೋನಾಜಿತ್ ಮಾತನಾಡಿ, ಮರಗೋಡು ಕೊಡಗಿನಲ್ಲಿ ಸ್ವಾವಲಂಭಿ ಜೀವನಕ್ಕೆ ಖ್ಯಾತವಾದ ಗ್ರಾಮವಾಗಿತ್ತು. ಅನೇಕರು ಸ್ವ ಉದ್ಯೋಗದ ಮೂಲಕ ತೃಪ್ತಿಯ ಜೀವನ ನಡೆಸುತ್ತಿದ್ದರು. ಇದೀಗ ಪ್ರವಾಹದಿಂದಾಗಿ ಮರ ಗೋಡು ವ್ಯಾಪ್ತಿಯ ಜನತೆಯ ಜೀವನ ಕ್ರಮವೇ ಬದಲಾಗುತ್ತಿದೆ ಎಂದರು.
ಸಾಂತ್ವನ ಕಾರ್ಯಕ್ರಮ ಸಂಚಾಲಕ, ರೋಟರಿ ವಲಯ 6 ರ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ಒಬ್ಬರೇ ಎಲ್ಲವನ್ನೂ ನಿಭಾಯಿಸುತ್ತೇವೆ ಎಂದಾಗ ಯಾವದೂ ಸಾಧ್ಯವಾಗಲಾರದು. ಆದರೆ ಎಲ್ಲರೊಂದಿಗೆ ಸಂಕಷ್ಟವನ್ನು ಎದುರಿಸುತ್ತೇನೆ ಎಂಬ ಆತ್ಮವಿಶ್ವಾಸ ರೂಡಿಸಿಕೊಂಡಾಗ ಹೊಸದೊಂದು ಮಾರ್ಗೋಪಾಯ ಸಂಕಷ್ಟಕ್ಕೀಡಾದ ಜನತೆಯ ಮುಂದಿರುತ್ತದೆ ಎಂದು ಧೈರ್ಯ ತುಂಬಿದರು. ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್ ಮಾತನಾಡಿ, ಕಳೆದ ವರ್ಷವೂ ಸಂಸ್ಥೆ ಲಕ್ಷಾಂತರ ರೂಪಾಯಿ ನೆರವಿನ ಸಾಮಗ್ರಿಗಳನ್ನು ಸಂತ್ರಸ್ತರಿಗೆ ನೀಡಿತ್ತು. ಈ ವರ್ಷವೂ ಕೊಡಗಿನ ಹಲವು ಸಂತ್ರಸ್ತರಿಗೆ ನೆರವು ನೀಡಲು ಬದ್ಧವಾಗಿದೆ ಎಂದು ಭರವಸೆ ನೀಡಿದರು. ಮಿಸ್ಟಿಹಿಲ್ಸ್‍ನ ನಿರ್ದೇಶಕ ಶ್ರೀಹರಿ ರಾವ್ ಮತ್ತು ಶಮಿಕ್‍ರೈ ದೇಶಭಕ್ತಿ ಗೀತೆಯನ್ನು ಹಾಡಿ ಮನಸೆಳೆದರು.
ಕಾರ್ಯಕ್ರಮದಲ್ಲಿ ನೋಡಲ್ ಅಧಿಕಾರಿ ಗಿರೀಶ್, ಮರಗೋಡು ಗ್ರಾ.ಪಂ. ಪಿಡಿಓ ಆಶಾ, ರೆಡ್ ಕ್ರಾಸ್ ಜಿಲ್ಲಾ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ,. ಕರ್ನಾಟಕ ಬೆಳೆಗಾರರ ಒಕ್ಕೂಟದ ವಕ್ತಾರ ಕೆ.ಕೆ.ವಿಶ್ವನಾಥ್, ಭಾರತೀಯ ವೈದ್ಯಕೀಯ ಸಂಘದ ಕೊಡಗು ಘಟಕದ ಅಧ್ಯಕ್ಷ ಡಾ. ನವೀನ್, ತಾ.ಪಂ. ಸದಸ್ಯ ಅಪ್ಪುರವೀಂದ್ರ ವೇದಿಕೆಯಲ್ಲಿದ್ದರು. ಮಿಸ್ಟಿ ಹಿಲ್ಸ್ ತಂಡದ ವೈದ್ಯರು, ವಕೀಲರು, ಸದಸ್ಯರು ಸಾಂತ್ವನ ಕಾರ್ಯಕ್ರಮದಲ್ಲಿ ನೊಂದವರೊಂದಿಗೆ ಸಂವಾದ ನಡೆಸಿ ಅಗತ್ಯ ನೆರವು ನೀಡಿದರು. ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪ್ರಮೋದ್ ಕುಮಾರ್ ರೈ ವಂದಿಸಿದರು.