ಸಿದ್ದಾಪುರ, ಆ. 19: ಪ್ರವಾಹ ಹೊಡೆತದಿಂದಾಗಿ ಬೆಟ್ಟದಕಾಡುವಿನಲ್ಲಿ ಬೆಟ್ಟದಷ್ಟು ಸಮಸ್ಯೆಗಳು ಉದ್ಭವಗೊಂಡು ನದಿ ತೀರದ ನಿವಾಸಿಗಳು ಮನೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡು ಅತಂತ್ರರಾಗಿದ್ದಾರೆ. ಈ ಬಾರಿಯ ಮಹಾಮಳೆಗೆ ಪ್ರವಾಹ ಏರಿಕೆಯಾಗಿ ಬೆಟ್ಟದಕಾಡುವಿನ ನದಿ ದಡದಲ್ಲಿ 27ಕ್ಕೂ ಅಧಿಕ ಮನೆಗಳು ಕುಸಿದಿರುತ್ತವೆ 50ಕ್ಕೂ ಅಧಿಕ ಮನೆಗಳು ಹಾನಿಯಾಗಿರುತ್ತವೆ.

ಹಲವಾರು ಮನೆಗಳ ಅಡಿಪಾಯ ಅಲ್ಲಾಡುತ್ತಿದೆ .ನದಿ ದಡವು ಉದ್ದಕ್ಕೂ ಕುಸಿದಿರುತ್ತಿದೆ. ದಿನದಿಂದ ದಿನಕ್ಕೆ ಅಪಾಯವಾಗುತ್ತಿದೆ . ಈ ಹಿನ್ನೆಲೆಯಲ್ಲಿ ನದಿ ದಡದ ನಿವಾಸಿಗಳು ತಾವು ಸುರಕ್ಷಿತ ಸ್ಥಳ ಸರ್ಕಾರ ಕಲ್ಪಿಸಿದ್ದಲ್ಲಿ ತಾವು ಸ್ಥಳಾಂತರಗೊಳ್ಳುತ್ತೇವೆಂಬ ನಿರ್ಧಾರಕ್ಕೆ ಬಂದಿದ್ದಾರೆ. ಬಹುತೇಕ ಮನೆಗಳ ಹಿಂಬದಿಯು ಕುಸಿದಿರುತ್ತದೆ. ಮನೆಯ ಒಳಗಿನಿಂದ ನದಿಯು ಎದ್ದು ಕಾಣುತ್ತಿದೆ. ಜಲಾವೃತಗೊಂಡಿರುವ ಮನೆಗಳು ಕೂಡ ಅಪಾಯದಲ್ಲಿವೆ. ಬಿರುಕು ಬಿಟ್ಟಿರುವ ಗೋಡೆಗಳು ಇಂದೋ ನಾಳೆಯೋ ಕುಸಿದು ಬೀಳುವ ಹಂತದಲ್ಲಿದೆ. ನೆಲ್ಲಿಹುದಿಕೇರಿಯಲ್ಲಿ ಕೇಳರಿಯದಷ್ಟು ನಷ್ಟಗಳು ಸಂಭವಿಸಿವೆ. ನದಿ ತೀರದ ಸುತ್ತಮುತ್ತಲಿನ ನಿವಾಸಿಗಳ ಮುಖದಲ್ಲಿ ಮಡುಗಟ್ಟಿದ ದುಃಖ ಎದ್ದುಕಾಣುತ್ತಿದೆ. ನೋವಿನಲ್ಲಿ ಅಳಿದು ಉಳಿದ ವಸ್ತುಗಳನ್ನು ಹುಡುಕುತ್ತಿದ್ದಾರೆ.

ಮನೆ ಕುಸಿದ ಪರಿಣಾಮ ಹಲವು ನಿವಾಸಿಗಳ ಬೆಲೆಬಾಳುವ ಅಲ್ಮೆರ ಗಳು ಅದರೊಳಗಿದ್ದ ಬಟ್ಟೆಗಳು ದಾಖಲೆಗಳು ಮಣ್ಣುಪಾಲಾಗಿವೆ. ಮಲಗಲು ಮಂಚ ಇಲ್ಲ.ಹಾಕಲು ಬಟ್ಟೆ ಇಲ್ಲ. ಹಾಸಿಗೆಗಳು ಇಲ್ಲ ಎಲ್ಲವೂ ನದಿ ಪಾಲಾಗಿವೆ ಎಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಶಾಲಾ ಮಕ್ಕಳ ಸಮವಸ್ತ್ರ ಪುಸ್ತಕಗಳು ನೀರಿನಲ್ಲಿ ಮುಳುಗಿ ಹಾನಿಯಾಗಿರುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸುವದೇ ಸಮಸ್ಯೆಯಾಗಿದೆ .ನದಿತೀರದ ಉದ್ದಕ್ಕೂ ನೀರಿನಲ್ಲಿ ಕೊಚ್ಚಿ ಹೋಗಿರುವ ಬಟ್ಟೆಗಳು, ಹಾಸಿಗೆಗಳು, ರಾಶಿಗಟ್ಟಲೆ ಕಂಡುಬರುತ್ತಿವೆ. ನದಿಪಾತ್ರದ ನಿವಾಸಿಗಳಿಗೆ ಸಾಕಪ್ಪ ಸಾಕು ನದಿ ದಡದ ವಾಸ ಎಂಬ ಮಾತು ಕೇಳಿಬರುತ್ತಿದೆ. ನೆಲ್ಯಹುದಿಕೇರಿಯ ಬೆಟ್ಟದ ಕಾಡುವಿನ ರಸ್ತೆಯಲ್ಲಿ ಕಳೆದ ಸುಮಾರು ವರ್ಷಗಳಿಂದ ನರ್ಸರಿಯನ್ನು ಮಾಡಿಕೊಂಡು ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುತ್ತಿದ್ದ ಎ.ಆರ್ ಸುರೇಶ್ ಎಂಬವರ ನರ್ಸರಿಯ ಗಿಡಗಳು ಪ್ರವಾಹಕ್ಕೆ ಸಿಲುಕಿ ಸಂಪೂರ್ಣವಾಗಿ ನಾಶವಾಗಿ ನದಿ ಪಾಲಾಗಿದೆ .

ಇದಲ್ಲದೆ ಬೆಟ್ಟದ ಕಾಡಿನಲ್ಲಿ ತೆಂಗಿನ ಎಣ್ಣೆ ತಯಾರಿಸುವ ಜೋಸ್ ಎಂಬವರ ಎಣ್ಣೆ ತಯಾರಿಸುವ ಘಟಕಕ್ಕೆ ನೀರು ನುಗ್ಗಿ ಅಪಾರ ಪ್ರಮಾಣದ ಕೊಬ್ಬರಿಗಳು ನೀರಿನಲ್ಲಿ ಕೊಚ್ಚಿಹೋಗಿದ್ದು ನಷ್ಟ ಸಂಭವಿಸಿದೆ. ಈ ಬಾರಿಯ ಪ್ರವಾಹದಿಂದಾಗಿ ಲೆಕ್ಕ ಸಿಗದಷ್ಟು ನಷ್ಟ ಸಂಭವಿಸಿದೆ. ಇವುಗಳ ನಿಖರ ಮಾಹಿತಿ ಸಿಗಲು ಇನ್ನಷ್ಟು ಕಾಲಾವಕಾಶ ಬೇಕಾಗಿದೆ. ನದಿ ದಡದವರು ಇದೀಗ ಸರಕಾರದಿಂದ ತಮಗೆ ಸುರಕ್ಷಿತ ಸ್ಥಳದಲ್ಲಿ ಪುನರ್ವಸತಿ ಕಲ್ಪಿಸಿ ಕೊಡಬೇಕೆಂದು ಅಂಗಲಾಚಿದ್ದಾರೆ.

-ವಾಸು, ಸಿದ್ದಾಪುರÀ