ಗೋಣಿಕೊಪ್ಪಲು, ಆ. 19: ಸುಂದರ ಪರಿಸರದ ನಡುವೆ ತಮ್ಮ ಬದುಕನ್ನು ಕಟ್ಟಿಕೊಂಡಿದ್ದ ಕೆಲವು ಕುಟುಂಬಗಳು ಇಂತಹದೊಂದು ಅವಘಡ ಮುಂದೊಂದು ದಿನ ಸಂಭವಿಸಬಹುದು ಎಂದು ಊಹಿಸಿರಲಿಲ್ಲ. ಸುತ್ತಲಿನ ಹಸಿರಿನ ತಾಣದ ನಡುವೆ ಮನೆ,ತೋಟ, ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಸರ್ಕಾರ ಮೂಲಭೂತ ಸೌಕರ್ಯಗಳನ್ನು ಈ ಗ್ರಾಮಕ್ಕೆ ಒದಗಿಸಿತ್ತು. ಎಲ್ಲವೂ ಸರಿಯಾಗಿಯೇ ಸಾಗುತ್ತಿದ್ದ ಸಂದರ್ಭದಲ್ಲಿ ಈ ಬಾರಿ ಸುರಿದ ರಕ್ಕಸ ಮಳೆಗೆ ತೋರ ಗ್ರಾಮದ ಕೆಲವು ಮನೆಗಳು,ಜಾನುವಾರು ಕೊಚ್ಚಿ ಹೋಗಿದ್ದು ಇದೀಗ ಈ ಪ್ರದೇಶದಲ್ಲಿ ನೀರವ ಮೌನ ಆವರಿಸಿದೆ.ಮೇಲ್ಭಾಗದಿಂದ ಜರಿದು ಬಂದಿರುವ ಬೆಟ್ಟದ ಸಾಲು ಕಾಫಿ ತೋಟ, ಬೃಹತ್ ಮರಗಳು, ಸೇರಿದಂತೆ ಕುಟುಂಬಗಳು ವಾಸವಿದ್ದ ಮನೆಗಳನ್ನು ಸಂಪೂರ್ಣ ನಶಿಸಿ ಹೋಗುವಂತೆ ಮಾಡಿದ ಮಹಾಮಳೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದೆ. ವಾಹನದಲ್ಲಿ ತೆರಳಬಹುದಾಗಿದ್ದ ಈ ಜಾಗಕ್ಕೆ ಇದೀಗ ಸಂಪರ್ಕ ಕಡಿದುಕೊಂಡಿದ್ದು, ಕಾಲ್ನಡಿಗೆಯಲ್ಲಿಯೇ ಸಾಗಬೇಕಿದೆ.ಈ ದಾರಿಯಲ್ಲಿ ಸಾಗುವಾಗ ಹಲವು ತೋಡು, ಕೆಸರು, ಹಳ್ಳಗಳನ್ನು ದಾಟುತ್ತ ತೆರಳÀಬೇಕಾಗಿದೆ. ಇವುಗಳನ್ನು ದಾಟಿದ ನಂತರ ತೋರದಲ್ಲಿ ವಾಸವಿದ್ದ ಕೆಲವು ಕುಟುಂಬಗಳನ್ನು ಸರ್ವನಾಶ ಮಾಡಿದ ಪ್ರದೇಶ ಗೋಚರಿಸುತ್ತದೆ. ಬರಿಗಾಲು ಅಥವಾ ಗಂಬೂಟು ಧರಿಸಿ ಈ ಜಾಗದಲ್ಲಿ ಪ್ರಯಾಣ ಮಾಡಬಹುದು.ಚಪ್ಪಲಿ ಧರಿಸಿ ತೆರಳಿದರೆ ಕೆಸರಿನಲ್ಲಿ ಕಾಲು ಹೂತು ಹೋಗುವ ಸಂಭವವಿದೆ. ಮಳೆ ಬಿಟ್ಟು 15 ದಿನ ಕಳೆದರೂ ಇನ್ನೂ ಕೂಡ ಈ ಭಾಗಕ್ಕೆ ತೆರಳುವ ಮಾರ್ಗದಲ್ಲಿ ನೀರಿನ ತೇವಾಂಶ ಕಡಿಮೆಯಾಗಿಲ್ಲ. ಘಟನೆ ನಡೆದ ಆರಂಭದ ದಿನಗಳಿಂದಲೂ ಎನ್‍ಡಿಆರ್‍ಎಫ್ ತಂಡ ಮಣ್ಣಿನಡಿಯಲ್ಲಿ ಸಿಲುಕಿ ಕೊಂಡು ಪ್ರಾಣ ಕಳೆದುಕೊಂಡ ಮೃತ ದೇಹಗಳನ್ನು

(ಮೊದಲ ಪುಟದಿಂದ) ಹೊರ ತೆಗೆಯಲು ಹರಸಾಹಸಪಡುತ್ತಿದೆ. ಒಂದಲ್ಲ, ಎರಡಲ್ಲ, ಆರು ಹಿಟಾಚಿ ಗಳನ್ನು ಬಳಸಿ ಮುಂಜಾನೆಯಿಂದಲೇ ಕೆಲಸ ಆರಂಭಿಸಿ ಸೂರ್ಯ ಮುಳುಗುವವರೆಗೂ ಈ ಪ್ರದೇಶದಲ್ಲಿ ಶವಗಳಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಎನ್‍ಡಿಆರ್‍ಎಫ್ ತಂಡ ಶೋಧ ಕಾರ್ಯ ನಡೆಸುತ್ತಿರುವ ಸಂದರ್ಭ ಮಣ್ಣಿನಡಿಯಲ್ಲಿ ಸಿಲುಕಿರುವ ಜಾನುವಾರುಗಳ ಕಳೇಬರ ಹಿಟಾಚಿ ಯಂತ್ರದಲ್ಲಿ ಸಿಲುಕಿ ಬರುವ ದುರ್ವಾಸನೆಯ ನಡುವೆಯೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಪರಿಸ್ಥಿತಿ ಹೇಳ ತೀರದ್ದಾಗಿದೆ.

ಅಧಿಕಾರಿಗಳ ತಂಡ ಸ್ಥಳದಲ್ಲೇ ಮೊಕ್ಕಾಂಹೂಡಿದ್ದು ಕಾಣೆಯಾದವರ ಮೃತ ದೇಹದ ಕುರುಹುಗಳಿಗಾಗಿ ಶ್ರಮಿಸುತ್ತಿದೆ. ಸುತ್ತಲೂ ನೀರವ ಮೌನ ಆವರಿಸಿದ್ದು, ಈ ಭಾಗದಲ್ಲಿ ಹಿಟಾಚಿಯ ಘರ್ಜನೆ ಮಾತ್ರ ಕೇಳಿಬರುತ್ತಿದೆ. ಕಾಣೆಯಾದವರ ಕುಟುಂಬದ ಸದಸ್ಯರು ತಮ್ಮವರ ಮೃತ ದೇಹ ದೊರಕÀಬಹುದೆಂಬ ನಿರೀಕ್ಷೆಯಲ್ಲಿ ನೋವಿನೊಂದಿಗೆ ದಿನ ಕಳೆಯುತ್ತಿದ್ದಾರೆ.

ದುರ್ಘಟನೆ ನಡೆದ ಪ್ರದೇಶದಲ್ಲಿ ನೂರಾರು ಎಕರೆ ಕಾಫಿ ತೋಟ ನೆಲ ಸಮಗೊಂಡು, ಈ ಪ್ರದೇಶಗಳಲ್ಲಿ ಮಣ್ಣಿನ ರಾಶಿ ಬಂದು ನಿಂತಿದ್ದು, ಬೆಟ್ಟದ ಸಾಲುಗಳು ಈ ಭಾಗದ ಕೆಲವು ಪ್ರದೇಶಗಳನ್ನು ಮುಳುಗಿಸಿರು ವದರಿಂದ ಈ ಭಾಗದಲ್ಲಿದ್ದ ವಿದ್ಯುತ್ ಸೌಕರ್ಯ ಕಡಿತಗೊಂಡಿದೆ.

ಮುಳುಗಡೆಗೊಂಡಿರುವ ಪ್ರದೇಶದ ಸುಮಾರು ಇನ್ನೂರು ಮೀ. ದೂರದಲ್ಲಿರುವ ಬೆಳ್ಳಿಯಪ್ಪ ಎಂಬವರ ಕುಟುಂಬ ಹೊರತುಪಡಿಸಿದರೆ ಬೇರೆ ಯಾವದೇ ಮನೆಗಳು ಇಲ್ಲಿ ಕಾಣಸಿಗುತ್ತಿಲ್ಲ. ಇದೀಗ ಏಕೈಕ ಮನೆಯಾಗಿ ಉಳಿದಿರುವ ಬೆಳ್ಳಿಯಪ್ಪ ಕುಟುಂಬ ವಿದ್ಯುತ್ ಸೌಕರ್ಯವಿಲ್ಲದೆ ಸಂಕಷ್ಟಕ್ಕೆ ಸಿಲುಕಿದೆ.

ಇವರ ಕುಟುಂಬಕ್ಕೆ ಆಶ್ರಯ ವಾಗಿದ್ದ ಭತ್ತದ ಗದ್ದೆಗಳಿಗೆ ಮಣ್ಣು ನುಗ್ಗಿರುವದರಿಂದ ಜಾನುವಾರುಗಳಿಗೆ ಬೇಕಾದ ಮೇವು ಸಿಗುತ್ತಿಲ್ಲ. ಕುಡಿಯಲು ನೀರಿಗಾಗಿ ಗದ್ದೆಯ ಒಂದು ಬದಿಯಲ್ಲಿ ಗುಂಡಿ ತೆಗೆದು ಅದೇ ನೀರನ್ನು ಈ ಕುಟುಂಬ ಬಳಸುತ್ತಿದೆ. ಈ ಕುಟುಂಬಕ್ಕೆ ವಿದ್ಯುತ್ ಸೌಕರ್ಯ ನೀಡಲು ಚೆಸ್ಕಾಂ ಕ್ರಮಕೈಗೊಳ್ಳ ಬೇಕಾಗಿದೆ. ಜಾನುವಾರು ಗಳ ಮೇವಿಗಾಗಿ ಕಷ್ಟ ಪಡುತ್ತಿರುವ ಇವರು ದÀನ ಕರುಗಳನ್ನು ಬಿಟ್ಟು ನಾವು ಈ ಪ್ರದೇಶದಿಂದ ಹೊರ ಹೋಗಲು ಇಚ್ಚಿಸುವದಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ‘ಶಕ್ತಿ’ಗೆ ತಿಳಿಸಿದರು.

ಪ್ರತ್ಯಕ್ಷ ವರದಿ: ಹೆಚ್.ಕೆ. ಜಗದೀಶ್