ಕುಶಾಲನಗರ, ಆ. 19: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ದುಬಾರೆ ಸಾಕಾನೆ ಶಿಬಿರದಿಂದ ಈ ಬಾರಿ ಒಟ್ಟು 6 ಆನೆಗಳು ತೆರಳಲಿದ್ದು ಈ ತಿಂಗಳ 21 ರಂದು ಪ್ರಥಮ ತಂಡ ಮೈಸೂರಿಗೆ ಪ್ರಯಾಣಿಸಲಿದೆ. ಆನೆಗಳಾದ ವಿಜಯ, ಧನಂಜಯ, ಈಶ್ವರ ಪ್ರಥಮ ತಂಡದಲ್ಲಿ ತೆರಳಲು ಸಿದ್ದಗೊಳ್ಳುತ್ತಿದ್ದು ದ್ವಿತೀಯ ತಂಡದಲ್ಲಿ ಗೋಪಿ, ವಿಕ್ರಮ, ಕಾವೇರಿ ತೆರಳಲಿದೆ. ಕಳೆದ ಬಾರಿ ಒಟ್ಟು 6 ಆನೆಗಳು ಶಿಬಿರದಿಂದ ತೆರಳಿದ್ದು ಪ್ರಶಾಂತ್ ಮತ್ತು ಹರ್ಷ ಆನೆಗಳನ್ನು ಈ ಬಾರಿ ಕೈಬಿಡಲಾಗಿದೆ. ಈಶ್ವರ ಮೈಸೂರು ದಸರಾಗೆ ಪ್ರಥಮ ಬಾರಿಗೆ ಪ್ರವೇಶ ಪಡೆಯುತ್ತಿದೆ. ಎಲ್ಲಾ ಆನೆಗಳು ಆರೋಗ್ಯಕರವಾಗಿದ್ದು ಪೂರ್ವಸಿದ್ಧತೆ ನಡೆಯುತ್ತಿದೆ ಎಂದು ಸಾಕಾನೆ ಶಿಬಿರದ ಅಧಿಕಾರಿ ಕನ್ನಂಡ ರಂಜನ್ ತಿಳಿಸಿದ್ದಾರೆ.