ಮಡಿಕೇರಿ, ಆ. 19: ಕೊಡಗು ಜಿಲ್ಲೆಯಲ್ಲಿ ಈ ವರ್ಷದ ಮುಂಗಾರುವಿನ ಕೃಷಿ ಚಟುವಟಿಕೆ ಯಲ್ಲಿ ತೀವ್ರ ಹಿನ್ನೆಡೆಯೊಂದಿಗೆ ಪ್ರಸಕ್ತ ಶೇ. 50 ರಷ್ಟು ಮಾತ್ರ ಬೆಳವಣಿಗೆ ಕಂಡು ಬಂದಿದೆ. ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 30500 ಹೆಕ್ಟೇರ್ ಭತ್ತದ ನಾಟಿ ಕಾರ್ಯದ ಗುರಿ ಹೊಂದಲಾಗಿದ್ದು; ಇದೀಗ ಕೇವಲ 15843 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಸಸಿ ಮಡಿ ಬಿತ್ತನೆಯೊಂದಿಗೆ ನಾಟಿ ಕಾರ್ಯಕ್ಕೆ ಚಾಲನೆ ನೀಡಿರುವದು ಗೋಚರಿಸಿದೆ.ಈ ಪೈಕಿ ಕೃಷಿ ಇಲಾಖೆಯ ಲೆಕ್ಕಾಚಾರದಂತೆ ಮಡಿಕೇರಿ ತಾಲೂಕಿನಲ್ಲಿ 6500 ಹೆಕ್ಟೇರ್ ಭತ್ತದ ನಾಟಿ ಪೈಕಿ; 3250 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಇದುವರೆಗೆ ಗುರಿಮುಟ್ಟಲಾಗಿದ್ದು; ಕಳೆದ 15 ದಿನಗಳ ನಡುವಿನ ಮಳೆಯಿಂದಾಗಿ ಅಲ್ಲಲ್ಲಿ ಪ್ರವಾಹಕ್ಕೆ ಸಿಲುಕಿ; ಸಸಿಮಡಿಗಳು ಹಾಗೂ ಗದ್ದೆಗಳ ಮುಳುಗಡೆಯ ಪರಿಣಾಮ ಕೃಷಿ ಕಾರ್ಯಕ್ಕೆ ತೊಂದರೆ ಎದುರಾಗಿತ್ತು.,

ಇನ್ನೊಂದೆಡೆ ವೀರಾಜಪೇಟೆ ತಾಲೂಕಿನ ಲಕ್ಷ್ಮಣತೀರ್ಥ ನದಿ ಪಾತ್ರದಲ್ಲಿ ಭೂಮಿ ಮುಳುಗಡೆಯಿಂದ ಮುಂಗಾರು ಕೃಷಿಗೆ ಅಡಚಣೆ ಉಂಟಾಗಿತ್ತು. ಈ ತಾಲೂಕಿನಲ್ಲಿ ಕೃಷಿ ಇಲಾಖೆಯ ನಿರೀಕ್ಷೆಯಂತೆ; 14 ಸಾವಿರ ಹೆಕ್ಟೇರ್ ಭತ್ತದ ನಾಟಿ ಕೃಷಿ ಸಾಧನೆಯಾಗಬೇಕಿದ್ದು; ಪ್ರಸಕ್ತ ಅವಧಿಗೆ ಕೇವಲ 5193 ಹೆಕ್ಟೇರ್ ಮಾತ್ರ ಗುರಿ ಸಾಧನೆ ಕಂಡು ಬಂದಿದೆ. ಕಳೆದ ಆರೆಂಟು ದಿನಗಳಿಂದ ನದಿಪ್ರವಾಹ ಇಳಿದಿರುವ ಬಳಿಕ; ಈಗಷ್ಟೇ ನಾಟಿ ಕಾರ್ಯವನ್ನೂ ರೈತರು ಮುಂದುವರೆಸಿರುವದು ಅಲ್ಲಲ್ಲಿ ಗೋಚರಿಸುವಂತಾಗಿದೆ.ಉತ್ತರ ಕೊಡಗಿನ ಗ್ರಾಮೀಣ ಭಾಗಗಳಲ್ಲಿ ಎರಡು ತಿಂಗಳ ಹಿಂದೆಯೇ ಭತ್ತದ ನಾಟಿಯೊಂದಿಗೆ; ಕೆಲವೆಡೆ ಬಯಲು ಸೀಮೆಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಿರುವದು ಕಂಡು ಬಂದಿದೆ. ಈ ತಾಲೂಕಿನಲ್ಲಿ 10 ಸಾವಿರ ಹೆಕ್ಟೇರ್ ಭತ್ತದ ನಾಟಿ ನಿರೀಕ್ಷಿಸಲಾಗಿದೆ. ಪ್ರಸಕ್ತ 7400 ಹೆಕ್ಟೇರ್ ಪ್ರದೇಶದಲ್ಲಿ ಸಾಧನೆಯಾಗಿದೆ. ಇನ್ನು ಜೋಳ ಕೃಷಿ 4 ಸಾವಿರ ಹೆಕ್ಟೇರ್ ಗುರಿ ಹೊಂದಲಾಗಿದೆ. ಈ ಪೈಕಿ ಕೇವಲ 2980 ಹೆಕ್ಟೇರ್ ಮಾತ್ರ ಈ ತನಕ ಸಾಧನೆ ಕಂಡು ಬಂದಿದೆ.

ಒಟ್ಟಿನಲ್ಲಿ ಜಿಲ್ಲೆಯೆಲ್ಲೆಡೆ ಪ್ರಸಕ್ತ ಸಾಲಿನ ಆರಂಭಿಕ ಮುಂಗಾರು ಮಳೆಯ ಹಿನ್ನೆಡೆಯೊಂದಿಗೆ; ಈ ನಡುವೆ ಆಶ್ಲೇಷ

(ಮೊದಲ ಪುಟದಿಂದ) ಮಳೆ ಸೃಷ್ಟಿಸಿದ್ದ ಅವಾಂತರದ ಪರಿಣಾಮ ಕೊಡಗಿನಲ್ಲಿ; ಭತ್ತದ ಕೃಷಿ ಮಾತ್ರವಲ್ಲದೆ ಕಾಫಿ, ಒಳ್ಳೆಮೆಣಸು, ತೋಟಗಾರಿಕಾ ಬೆಳೆಗಳ ಮೇಲೆಯೂ ಪ್ರತಿಕೂಲ ಪರಿಣಾಮ ಉಂಟಾಗಿದೆ. ಅನೇಕ ಕಡೆಗಳಲ್ಲಿ ಕಾಫಿ ಫಸಲು ಉದುರುವಿಕೆಯೊಂದಿಗೆ; ಕೊಳೆ ರೋಗದ ಭೀತಿಯೊಂದಿಗೆ ರೈತ ಸಮೂಹ ಕಳವಳಗೊಂಡಿದೆ.

ಮಳೆ ವಿವರ: ಕೊಡಗು ಜಿಲ್ಲೆಯಲ್ಲಿ ಪ್ರಸಕ್ತ ವರ್ಷಾರಂಭದಿಂದ ಇಂದಿನ ತನಕ ಸರಾಸರಿ 80.24 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ ಜಿಲ್ಲೆಯಲ್ಲಿ ಸರಾಸರಿ 141.24 ಇಂಚು ಮಳೆಯಾಗಿತ್ತು. ಕಳೆದ ಮೂರು ದಿನಗಳಿಂದ ಮಖ ಮಳೆ ಸಾಕಷ್ಟು ಬಿಡುವಿನೊಂದಿಗೆ ಜನತೆ ನಿಟ್ಟುಸಿರು ಬಿಡುವಂತೆ ಸುಧಾರಣೆ ಕಲ್ಪಿಸಿದೆ.

ಮಡಿಕೇರಿ ತಾಲೂಕಿನಲ್ಲಿ ಈ ಸಾಲಿನ ಜನವರಿಯಿಂದ ಇಂದಿನ ತನಕ ಒಟ್ಟು 105.96 ಇಂಚು ಮಾತ್ರ ಮಳೆ ದಾಖಲಾಗಿದೆ. ಕಳೆದ ವರ್ಷ ಈ ತಾಲೂಕಿನಲ್ಲಿ ಪ್ರಸಕ್ತ ಅವಧಿಗೆ 201.93 ಇಂಚು ಮಳೆ ದಾಖಲಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಈ ವರ್ಷಾರಂಭದಿಂದ ಪ್ರಸಕ್ತ ಅವಧಿಗೆ 81.05 ಇಂಚು ಮಳೆಯಾಗಿದ್ದರೆ; ಕಳೆದ ವರ್ಷ ಇದೇ ವೇಳೆಗೆ 108.96 ಇಂಚು ದಾಖಲಾಗಿತ್ತು. ಈ ತಾಲೂಕಿನ ಬಿರುನಾಣಿ, ಶ್ರೀಮಂಗಲ, ಕುಟ್ಟ, ಹುದಿಕೇರಿ, ಕಾನೂರು ಸುತ್ತಮುತ್ತ ಜಲಪ್ರವಾಹ ಸಾಕಷ್ಟು ಹಾನಿಗೊಳಿಸಿರುವ ವರದಿಗಳು ಲಭಿಸಿವೆ.

ಇನ್ನೂ ಸೋಮವಾರಪೇಟೆ ತಾಲೂಕಿನಲ್ಲಿ ಪ್ರಸಕ್ತ ಅವಧಿಗೆ ಒಟ್ಟು 52.90 ಇಂಚು ಮಾತ್ರ ಮಳೆ ದಾಖಲಾಗಿದೆ. ಕಳೆದ ವರ್ಷ ಈ ವೇಳೆಗೆ 112.81 ಇಂಚು ಮಳೆಯಾಗಿತ್ತು. ಕಳೆದ ವರ್ಷದ ಪ್ರಾಕೃತಿಕ ವಿಕೋಪ ಒಂದೆಡೆ ಜಿಲ್ಲೆಯ ಹಲವಷ್ಟು ಪ್ರದೇಶಗಳಲ್ಲಿ ಸಂಕಷ್ಟ ತಂದೊಡ್ಡಿದ್ದರೆ; ಈ ಅವಧಿಯಲ್ಲಿ ಜಲಪ್ರವಾಹದೊಂದಿಗೆ ಬೇರೆಡೆಗಳಲ್ಲಿ ಅಪಾಯ ತಂದೊಡ್ಡಿದೆ. ಹೀಗಾಗಿ ಕೊಡಗಿನ ರೈತ ಸಮೂಹದೊಂದಿಗೆ; ದುಡಿಯುವ ವರ್ಗ ಸಹಿತ ಎಲ್ಲಾ ಜನಸಮೂಹ ಒಂದೊಂದು ರೀತಿಯ ಬವಣೆ ಪಡುವಂತಾಗಿದೆ.