ಮಡಿಕೇರಿ, ಆ. 17: ನಗರದ ಸಂಪಿಗೆಕಟ್ಟೆ ಬಳಿಯ ಹೋಂ ಸ್ಟೇ ಒಂದರಲ್ಲಿ ಕೆಲವರು ಇಸ್ಪೀಟ್ ಆಡುತ್ತಿರುವ ಖಚಿತ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ ಸಂದರ್ಭ ಯುವಕನೋರ್ವ ತಪ್ಪಿಕೊಳ್ಳುವ ಭರದಲ್ಲಿ ಜಾರಿ ಬಿದ್ದು, ಮೃತಪಟ್ಟ ಘಟನೆ ನಡೆದಿದೆ. ಮೃತ ಯುವಕನನ್ನು ತ್ಯಾಗರಾಜ್ ಕಾಲೋನಿಯ ನಿವಾಸಿ ನಾಸೀರ್ (35) ಎಂದು ಗುರುತಿಸಲಾಗಿದ್ದು, ಮೃತ ಯುವಕನ ಪೋಷಕರು ಇದೊಂದು ಸಂಶಯಾಸ್ಪದ ಸಾವು ಎಂದು ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರ ಪೊಲೀಸರು ಸಂಶಯಾಸ್ಪದ ಸಾವು ಪ್ರಕರಣ ಎಂದು ದೂರು ದಾಖಲಿಸಿಕೊಂಡಿರುವದಾಗಿ ತಿಳಿದು ಬಂದಿದೆ. ಮಡಿಕೇರಿ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಪೋಷಕರಿಗೆ ಒಪ್ಪಿಸಲಾಯಿತು.