ಮಡಿಕೇರಿ, ಆ. 17: ನಾಲ್ಕುನಾಡುವಿನಲ್ಲಿರುವ ಐತಿಹಾಸಿಕ ರಾಜರ ಅರಮನೆಯು; ನಿರ್ವಹಣೆ ಯಿಲ್ಲದೆ ಅಪಾಯದಲ್ಲಿದ್ದು; ಅರಮನೆಯ ಮುಖ್ಯದ್ವಾರದಲ್ಲಿ ತಡೆಗೋಡೆ ಇತ್ಯಾದಿ ಕುಸಿದು ಬಿದ್ದಿದೆ. ಈ ಅರಮನೆಯನ್ನು ಸಮರ್ಪಕವಾಗಿ ಕರ್ನಾಟಕ ಪ್ರಾಚ್ಯವಸ್ತು ಇಲಾಖೆ ಯಿಂದ ನಿರ್ವಹಿಸದೆ ಅಪಾಯ ಎದುರಾಗಿದೆ ಎಂದು ಮಡಿಕೇರಿ ತಾ.ಪಂ. ಉಪಾಧ್ಯಕ್ಷ ಸಂತು ಸುಬ್ರಮಣಿ ಹಾಗೂ ಕಕ್ಕಬ್ಬೆ - ಕುಂಜಿಲ ಗ್ರಾ.ಪಂ. ಅಧ್ಯಕ್ಷೆ ಕರ್ತಂಡ ಶೈಲಾ ಕುಟ್ಟಪ್ಪ ಆರೋಪಿಸಿದ್ದಾರೆ.

ಅರಮನೆಯ ಪ್ರವೇಶ ದ್ವಾರ ಬಳಿ ಕುಸಿತದೊಂದಿಗೆ ಅಪಾಯದ ಕುರಿತು ವಿಷಯ ತಿಳಿಯುತ್ತಿ ದ್ದಂತೆಯೇ; ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು ಖುದ್ದು ಪರಿಶೀಲನೆ ನಡೆಸಿದರು. ಈ ಸಂದರ್ಭ ಸ್ಥಳೀಯ ಅಲ್ಲಿನ ಜನಪ್ರತಿನಿಧಿಗಳೊಂದಿಗೆ ಮನು ಮಹೇಶ್, ಕುಡಿಯರ ಮುತ್ತಪ್ಪ ಹಾಗೂ ಇತರರು ಹಾಜರಿದ್ದು; ಅರಮನೆ ಸಂರಕ್ಷಣೆಗೆ ಸರಕಾರದ ಗಮನ ಸೆಳೆಯುವಂತೆ ಮನವಿ ಮಾಡಿಕೊಂಡರು.