ಗೋಣಿಕೊಪ್ಪಲು, ಆ.16: ಗೋಣಿಕೊಪ್ಪಲು ಸಮೀಪದ ಅರುವತೊಕ್ಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮುಖ್ಯ ರಸ್ತೆಯ; ಕಾಫಿ ಬೋರ್ಡ್ ಸಮೀಪವಿರುವ ರಸ್ತೆಯ ಎರಡು ಬದಿಯಲ್ಲಿ ಬುಧವಾರ ಮುಂಜಾನೆ ಸರಣಿ ಕಳ್ಳತನ ನಡೆಸಿ ಪರಾರಿಯಾಗಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು; ಸಾರ್ವಜನಿಕರ ಪ್ರಶಂಸೆಗೆ ಕಾರಣವಾಗಿದ್ದಾರೆ.

ಆರೋಪಿ ಕಡಂಗ ಗ್ರಾಮದ ಸಲಾಂನನ್ನು ವಶಕ್ಕೆ ಪಡೆದ ಪೊಲೀಸರು; ಆತನಿಂದ ಕಳ್ಳತನವಾಗಿದ್ದ ಎಲ್‍ಇಡಿ ಟಿ.ವಿ.ಮೊಬೈಲ್, ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಯು ಹೊಟೇಲ್ ಹಾಗೂ ಮೊಬೈಲ್ ಅಂಗಡಿಯಲ್ಲಿ ಕಳ್ಳತನ ನಡೆಸಿದ್ದ.

ಮುಖ್ಯ ರಸ್ತೆಯ ಬದಿಯಲ್ಲಿರುವ ಹೊಟೇಲ್ ಹಾಗೂ ಅಂಗಡಿ ಬೀಗ ಮುರಿದು ನಗದು ಸೇರಿದಂತೆ ಇನ್ನಿತರ ವಸ್ತುಗಳನ್ನು ದೋಚುವ ಮೂಲಕ ಭಯದ ವಾತಾವರಣ ಸೃಷ್ಟಿಸಿದ್ದ ಈತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದರು. ಸಿ.ಪಿ.ಐ ದಿವಾಕರ್ ಕಳ್ಳರ ಬಂಧನಕ್ಕೆ ವಿಶೇಷ ತಂಡ ರಚಿಸಿದ್ದರು. ಕಳ್ಳತನ ನಡೆಸಿದ 24 ಗಂಟೆಯೊಳಗೆ ಕ್ಷಿಪ್ರ ಕಾರ್ಯಾಚರಣೆ ನಡೆಸುವ ಮೂಲಕ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯು ಕಳ್ಳತನ ನಡೆಸಿದ ನಂತರ ಕದ್ದ ಮಾಲುಗಳನ್ನು ಬಚ್ಚಿಟ್ಟು ಏನು ಅರಿಯದಂತೆ ವೀರಾಜಪೇಟೆ ಸಮೀಪ ಪಾರಾಣೆ ಗ್ರಾಮದಲ್ಲಿ ತಿರುಗಾಡುತ್ತಿದ್ದ. ಪೊಲೀಸರ ವಿಶೇಷ ತಂಡ ಈತನ ಮಾಹಿತಿ ಪಡೆದು ವಶಕ್ಕೆ ಪಡೆಯುತ್ತಿದ್ದಂತೆಯೇ ಕಳ್ಳತನ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡು ಕದ್ದ ಸ್ವತ್ತನ್ನು ಪೊಲೀಸರಿಗೆ ನೀಡಿದ್ದಾನೆ.

ಗುರುವಾರ ಪಾರಾಣೆಯಲ್ಲಿ ಅರೋಪಿಯನ್ನು ವಶಕ್ಕೆ ತೆಗೆದುಕೊಂಡು 1 ಎಲ್‍ಇಡಿ ಟಿ.ವಿ. 3 ಮೊಬೈಲ್ ಬ್ಯಾಟರಿಗಳು, 3 ಟಾರ್ಚ್ ಹಾಗೂ 500 ನಗದು ವಶಕ್ಕೆ ಪಡೆದುಕೊಳ್ಳಲಾಯಿತು.

ತಾ.14 ರಂದು ತಡರಾತ್ರಿ ಅರ್ವತೋಕ್ಲು ಗ್ರಾಮದ ಹೋಟೆಲ್ ಹಾಗೂ ಮೊಬೈಲ್ ಅಂಗಡಿ ಷಟ್ಟರ್ಸ್ ಬೀಗ ಹೊಡೆದು ಕಳವು ಮಾಡಲಾಗಿತ್ತು. ಟಿವಿ, ಬ್ಯಾಟರಿ, ಸ್ಪೀಕರ್, ಈಯರ್ ಫೋನ್, ಪೆನ್‍ಡ್ರೈವ್ ಇತ್ಯಾದಿ ವಸ್ತುಗಳು ಕಳವಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣದಂತೆ; ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಡಿ.ಪಿ. ಹಾಗೂ ಸಿಪಿಐ ದಿವಾಕರ್ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಶ್ರೀಧರ್, ಕ್ರೈಂ ಎಸ್.ಐ. ಮಂಚಯ್ಯ, ಎ.ಎಸ್.ಐ.ನಂಜಪ್ಪ ಸಿಬ್ಬಂದಿಗಳಾದ ಸುರೇಂದ್ರ, ಉಮೇಶ್, ಪೂವಣ್ಣ, ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

-ಚಿತ್ರ ವರದಿ : ಹೆಚ್.ಕೆ.ಜಗದೀಶ್, ಟಿ.ಎಲ್.ಎಸ್., ಸುದ್ದಿಪುತ್ರ.