ವೀರಾಜಪೇಟೆ, ಆ. 16: ಭೂ ಕುಸಿತ ಹಾಗೂ ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂತ್ರಸ್ತರಿಗೆ ಶುದ್ಧವಾದ ಕುಡಿಯುವ ನೀರನ್ನು ಪೂರೈಸಲಾಗುತ್ತಿದ್ದು ಯಾವದೇ ಊಹಪೋಹಾಗಳಿಗೆ ಕಿವಿ ಕೊಡಬಾರದು ಎಂದು ಜಿಲ್ಲಾ ಪಂಚಾಯತ್ ನೀರು ಮತ್ತು ನ್ಯೆರ್ಮಲ್ಯ ಇಲಾಖಾ ಅಧಿಕಾರಿ ರವಿಕುಮಾರ್ ಹೇಳಿದರು.
ಹೆಗ್ಗಳ ನಿರಾಶ್ರಿತರ ಕೇಂದ್ರದಲ್ಲಿ ಕುಡಿಯುವ ನೀರಿನ ಗುಣಮಟ್ಟ ಸರಿ ಇಲ್ಲ ಎಂದು ಸಾಮಾಜಿಕ ಜಾಲ ತಾಣದಲ್ಲಿ ಸುದ್ದಿ ವೈರಲ್ ಆದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ನಿರ್ದೇಶನದಂತೆ ನೀರು ಮತ್ತು ನ್ಯೆರ್ಮಲ್ಯ ಅಧಿಕಾರಿಗಳು ಕಾಕೋಟುಪರಂಬು ನಿರಾಶ್ರಿತರ ಕೇಂದ್ರಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಶುದ್ಧತೆಯ ಕುರಿತು ಪ್ರಾತ್ಯಕ್ಷತೆ ಮೂಲಕ ಸಂತ್ರಸ್ತರಿಗೆ ಅರಿವು ಮೂಡಿಸಿದರು.
ಕಾಕೋಟುಪರಂಬು, ಪೊನ್ನಂಪೇಟೆ, ಗೋಣಿಕೊಪ್ಪ, ಹೆಗ್ಗಳ ಕೇಂದ್ರಗಳಿಗೆ ಭೇಟಿ ನೀಡಿ ನಿರಾಶ್ರಿತರ ಸಮ್ಮುಖದಲ್ಲಿ ಅಡುಗೆಗೆ ಬಳಸುವ ನೀರಿನ ಗುಣಮಟ್ಟವನ್ನು ಪರೀಕ್ಷಿಸಿ ಮಾಹಿತಿ ನೀಡಿದರು. ಕಾಕೋಟುಪರಂಬು ಪರಿಹಾರ ಕೇಂದ್ರದಲ್ಲಿ ಮೂರು ತಿಂಗಳ ಬಾಣಂತಿ ಸೇರಿದಂತೆ 37 ನಿರಾಶ್ರಿತರು ಆಶ್ರಯ ಪಡೆದಿದ್ದಾರೆ.
ಇದೇ ಸಂದರ್ಭ ಕಾಕೋಟುಪರಂಬು ಜಿಲ್ಲಾ ಪಂಚಾಯತ್ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ, ಸದಸ್ಯ ಮಂಡೇಟಿರ ಅನಿಲ್ ಅಯ್ಯಪ್ಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ರತ್ನಾ ಮೈಪಾಲ, ಮೇಲ್ವಿಚಾರಕಿ ರೀನಾ ಪೂವಣ್ಣ, ನೋಡಲ್ ಅಧಿಕಾರಿ ಹೊನ್ನೂರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.