ನಾಪೋಕ್ಲು, ಆ. 16: ಕಳೆದ ವಾರ ಉಕ್ಕೇರಿದ ಕಾವೇರಿ ನದಿ ಪ್ರವಾಹ ದಿಂದಾಗಿ ಜನರಷ್ಟೇ ಅಲ್ಲದೇ ಮೂಕಪ್ರಾಣಿಗಳು ಸಹ ಸಂಕಷ್ಟದಲ್ಲಿ ಸಿಲುಕಿದ್ದವು ಎಂಬದಕ್ಕೆ ನಿದರ್ಶನ ಎಂಬಂತೆ ಪಟ್ಟಣದ ಮನೆಯೊಂದರ ಬಳಿ ಕಾಡುಕುರಿಯೊಂದು ಪತ್ತೆಯಾಗಿದೆ.
ನಾಪೋಕ್ಲು ನಿವಾಸಿ ಕಲಿಯಂಡ ಸಾಬು ಅಯ್ಯಣ್ಣ ಎಂಬುವರ ಮನೆಯ ಹಿಂಬದಿಯಲ್ಲಿ ಕಾಡುಕುರಿ ಪತ್ತೆಯಾಗಿದ್ದು, ಮನೆಯ ಕೋಳಿಗೂಡಿನ ಕಬ್ಬಿಣದ ಜಾಲರಿ ಹಾಗೂ ಬರೆಯ ಮದ್ಯೆ ಸಿಲುಕಿಕೊಂಡು ಹೊರಬರಲು ಕಾಡುಕುರಿ ವಿಫಲಯತ್ನ ನಡೆಸಿದೆ. ಈ ಸಂದರ್ಭ ಕಾಡುಕುರಿಯ ಮುಖಭಾಗದಲ್ಲಿ ಗಾಯಗಳುಂಟಾಗಿದೆ. ಸಾಬು ಅವರು ಹರಸಾಹಸದಿಂದ ಕಾಡುಕುರಿಯನ್ನು ಸೆರೆಹಿಡಿದು ನಾಪೋಕ್ಲು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಬಳಿಕ ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ಮೇರೆಗೆ ಉಪವಲಯ ಅರಣ್ಯಾಧಿಕಾರಿ ಸುರೇಶ್, ಅರಣ್ಯ ರಕ್ಷಕ ಕಾಳೇಗೌಡ, ಅರಣ್ಯ ವೀಕ್ಷಕ ಪ್ರವೀಣ್ ಅವರುಗಳು ಸ್ಥಳಕ್ಕಾಗಮಿಸಿ ಗಾಯಗೊಂಡ ಕಾಡುಕುರಿಗೆ ಸ್ಥಳೀಯ ಪಶುವೈದ್ಯ ಕೇಂದ್ರದಲ್ಲಿ ಸುನೀಲ್ ಅವರಿಂದ ಚಿಕಿತ್ಸೆ ಕೊಡಿಸಿದ ಬಳಿಕ ಇಗ್ಗುತ್ತಪ್ಪ ದೇವಾಲಯ ಸಮೀಪದ ಮಲ್ಮ ಬೆಟ್ಟದಲ್ಲಿ ಕಾಡುಕುರಿಯನ್ನು ಸುರಕ್ಷಿತವಾಗಿ ಬಿಡಲಾಯಿತು.
- ದುಗ್ಗಳ ಸದಾನಂದ