ಮಡಿಕೇರಿ, ಆ. 16 : ಕಳೆದ ವಾರ ಸುರಿದ ಧಾರಾಕಾರ ಮಳೆಯಿಂದ ವೀರಾಜಪೇಟೆ ತಾಲೂಕಿನ ಹಲವಾರು ಗ್ರಾಮಗಳಲ್ಲಿ ಪ್ರವಾಹ ಉಂಟಾಗಿದ್ದು, ಸಾಂಕ್ರಾಮಿಕ ರೋಗಗಳು ಅದರಲ್ಲೂ ಮುಖ್ಯವಾಗಿ ನೀರಿನಿಂದ ಹರಡಬಹುದಾದ ಕರಳು ಬೇನೆ, ಕಾಲಾರ, ಕಾಮಾಲೆ, ವಿಷಮ ಶೀತ ಜ್ವರ, ಇಲಿ ಜ್ವರ ಹಾಗೂ ಸೊಳ್ಳೆಗಳಿಂದ ಹರಡಬಹುದಾದ ಡೆಂಗ್ಯು ಜ್ವರ, ಚಿಕುನ್‍ಗುನ್ಯ ಹಾಗೂ ಮಲೇರಿಯಾ ಕಾಯಿಲೆಗಳು ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದ್ದು, ಆರೋಗ್ಯ ಇಲಾಖೆಯಿಂದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿವಿಧ ತಂಡಗಳನ್ನು ರಚಿಸಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.

ಅಲ್ಲದೆ ಯಾರಿಗಾದರೂ ರೋಗ ಲಕ್ಷಣಗಳಾದ ತೀವ್ರ ಜ್ವರ, ತಲೆನೋವು, ವಾಂತಿ, ಭೇದಿ, ಕೀಲುಗಳಲ್ಲಿ ನೋವು ಬರುವದು, ಕಣ್ಣು ಗುಡ್ಡೆಗಳಲ್ಲಿ ನೋವು ಬರುವದು, ಮೈಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುವದು ಇತ್ಯಾದಿ ಕಂಡು ಬಂದಲ್ಲಿ ಹತ್ತಿರದ ಉಪ ಕೇಂದ್ರ ಅಥವಾ ಸರ್ಕಾರಿ ಆಸ್ಪತ್ರೆಯನ್ನು ಸಂಪರ್ಕಿಸುವಂತೆ ವೀರಾಜಪೇಟೆ ತಾಲೂಕು ಆರೋಗ್ಯಾಧಿಕಾರಿ ಅವರು ತಿಳಿಸಿದ್ದಾರೆ.