ವೀರಾಜಪೇಟೆ, ಆ. 16: ಕರ್ನಾಟಕ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಾಗಿರುವ ನೀಲಮಣಿ ರಾಜು ಅವರು ಇಂದು ವೀರಾಜಪೇಟೆಗೆ ಭೇಟಿ ನೀಡಿದ್ದರು. ಈ ಸಂದರ್ಭ ಎಡಿಜಿಪಿ ಅಮರ್‍ಕುಮಾರ್ ಪಾಂಡೆ; ಮೈಸೂರು ಪೊಲೀಸ್ ಆಯುಕ್ತ ದಕ್ಷಿಣ ವಲಯ ಪ್ರಬಾರ ಐಜಿಪಿ ಬಾಲಕೃಷ್ಣ, ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ., ಪ್ರಭಾರ ಉಪ ಅಧೀಕ್ಷಕ ಮುರುಳಿಧರ್ ಮೊದಲಾದವರು ಹಾಜರಿದ್ದರು.ಡಿಜಿ ನೀಲಮಣಿ ರಾಜು ಅವರು ಕೊಡಗಿನ ಪ್ರಾಕೃತಿಕ ವಿಕೋಪ ಹಾಗೂ ಪ್ರವಾಹ ಪರಿಸ್ಥಿತಿಯೊಂದಿಗೆ; ಸಂತ್ರಸ್ತರ ನಿರ್ವಹಣೆ ಮತ್ತು ತೋರದಲ್ಲಿ ಕಣ್ಮರೆಯಾಗಿರುವವರ ಶೋಧ ಕಾರ್ಯಾಚರಣೆ ಬಗ್ಗೆ ಉನ್ನತ ಮಟ್ಟದ ಚರ್ಚೆ ನಡೆಸಿದರು. ಸುಮಾರು ಒಂದೂವರೆ ಗಂಟೆ ವೀರಾಜಪೇಟೆ ಯಲ್ಲಿ ಮೊಕ್ಕಾಂ ಹೂಡಿದ್ದ ಅವರು ತೋರದ ಬೆಟ್ಟಸಾಲಿನಲ್ಲಿ ಭೂಕುಸಿತದಿಂದ ಕಣ್ಮರೆಯಾದವರ ಪತ್ತೆಗೆ ಅನುಸರಿಸುತ್ತಿರುವ ಕಾರ್ಯಾಚರಣೆ ಕುರಿತು ಸಲಹೆಗಳನ್ನು ನೀಡುವದರೊಂದಿಗೆ ರಾಜಧಾನಿ ಬೆಂಗಳೂರಿಗೆ ನಿರ್ಗಮಿಸಿದರು.ಈ ವೇಳೆ ಎಡಿಜಿಪಿ ಮತ್ತು ಇತರ ಅಧಿಕಾರಿಗಳು ಖುದ್ದು ಭೂಕುಸಿತ ಸ್ಥಳ ವೀಕ್ಷಿಸಿ, ಸಂತ್ರಸ್ತ ಕುಟುಂಬಗಳಿಗೆ ಆತ್ಮಸ್ಥೈರ್ಯ ತುಂಬಿದರು. ಅಲ್ಲದೆ ಪರಿಹಾರ ಕೇಂದ್ರದಲ್ಲಿ ನೊಂದವರ ಅಳಲು ಆಲಿಸಿದರು.