ಸೋಮವಾರಪೇಟೆ,ಆ.16: ಆಗಸ್ಟ್ ಪ್ರಥಮ ವಾರದಿಂದ ಸುರಿದ ಆಶ್ಲೇಷ ಮಳೆಗೆ ಸೋಮವಾರಪೇಟೆ ತಾಲೂಕಿನಲ್ಲಿ 977 ಮನೆಗಳಿಗೆ ಹಾನಿಯಾಗಿದ್ದು, ಕಂದಾಯ ಇಲಾಖೆಯಿಂದ 4 ಕೋಟಿ, 53 ಲಕ್ಷದ 83 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ವರದಿ ತಯಾರಿಸಲಾಗಿದೆ.ಭಾರೀ ಮಳೆಯಿಂದಾಗಿ ಮನೆಗಳಿಗೆ ನದಿ ನೀರು ನುಗ್ಗಿರುವದು, ಮಣ್ಣಿನ ಗೋಡೆಗಳ ಮನೆ ಕುಸಿದಿರುವದು ಸೇರಿದಂತೆ ಮನೆಗೆ ಒತ್ತಿಕೊಂಡಂತಿರುವ ಕೊಟ್ಟಿಗೆ ಕುಸಿತ, ಮನೆ ಮೇಲೆ ಮರ ಬಿದ್ದಿರುವದು, ಗುಡಿಸಲು ಕುಸಿತದಂತಹ ಪ್ರಕರಣಗಳು ತಾಲೂಕು ವ್ಯಾಪ್ತಿಯಲ್ಲಿ ನಡೆದಿದ್ದು, ಸದ್ಯದ ಅಂದಾಜಿನ ಪ್ರಕಾರ 4.53 ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಧಿಕಾರಿಗಳು ವರದಿ ತಯಾರಿಸಿದ್ದಾರೆ.ಸೋಮವಾರಪೇಟೆ ತಾಲೂಕಿನ ಪಟ್ಟಣ ವ್ಯಾಪ್ತಿಯಲ್ಲಿ 17 ಕಚ್ಚಾ ಮನೆಗಳಿಗೆ ಸಂಪೂರ್ಣ ಹಾನಿ ಯಾಗಿದ್ದು, 1.15 ಕೋಟಿ ನಷ್ಟ ಸಂಭವಿಸಿದೆ. ಗ್ರಾಮೀಣ ಭಾಗದಲ್ಲಿ 81 ಪಕ್ಕಾ ಮನೆಗಳು ಸಂಪೂರ್ಣ ಹಾನಿಗೀಡಾಗಿದ್ದು, 25.95 ಲಕ್ಷ, 67 ಕಚ್ಚಾ ಮನೆಗಳಿಗೆ ಹಾನಿಯಾಗಿದ್ದು, 1 ಕೋಟಿ 31 ಲಕ್ಷದ 35 ಸಾವಿರ ನಷ್ಟ ಸಂಭವಿಸಿದೆ. ಒಟ್ಟಾರೆ 148 ಮನೆಗಳು ಹಾನಿಗೊಳಗಾಗಿದ್ದು, 1 ಕೋಟಿ 57 ಲಕ್ಷದ 30 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.81 ಪಕ್ಕಾ ಮನೆಗಳಿಗೆ ಹಾನಿ ಯಾಗಿರುವದರಿಂದ 25.95 ಲಕ್ಷ, 84 ಕಚ್ಚಾ ಮನೆಗಳಿಗೆ ಹಾನಿಯಾಗಿ ರುವದರಿಂದ 2 ಕೋಟಿ 46 ಲಕ್ಷದ 35 ಸಾವಿರ ನಷ್ಟ ಸಂಭವಿಸಿದೆ. ಒಟ್ಟಾರೆ ತಾಲೂಕಿನಲ್ಲಿ 165 ವಾಸದ ಮನೆಗಳಿಗೆ ಹಾನಿಯಾಗಿದ್ದು, 2 ಕೋಟಿ, 72 ಲಕ್ಷದ 30 ಸಾವಿರ ನಷ್ಟವಾಗಿರುವ ಬಗ್ಗೆ ತಾಲೂಕು ಕಚೇರಿಗೆ ವರದಿ ಸಲ್ಲಿಕೆಯಾಗಿದೆ.

ಇನ್ನು ಪಟ್ಟಣ ವ್ಯಾಪ್ತಿಯಲ್ಲಿ 2 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, 1ಲಕ್ಷ ನಷ್ಟ ಸಂಭವಿಸಿದೆ.

(ಮೊದಲ ಪುಟದಿಂದ) 3 ಕಚ್ಚಾ ಮನೆಗಳಿಂದ 1.45ಲಕ್ಷ ನಷ್ಟವಾಗಿದ್ದು, ಒಟ್ಟಾರೆ 2.45 ಲಕ್ಷ ನಷ್ಟವಾಗಿದೆ. ಗ್ರಾಮೀಣ ಭಾಗದಲ್ಲಿ 497 ಪಕ್ಕಾ ಮನೆಗಳಿಗೆ ಸಂಪೂರ್ಣ ಹಾನಿಯಾಗಿದ್ದು 87.31 ಲಕ್ಷ, 253 ಕಚ್ಚಾ ಮನೆಗಳು ಹಾನಿಗೊಂಡಿದ್ದು, ರೂಪಾಯಿ 90.5 ಲಕ್ಷ ನಷ್ಟಗೊಂಡಿದೆ. ಒಟ್ಟಾರೆ 750 ಮನೆಗಳು ಹಾನಿಗೊಳಗಾಗಿದ್ದು, 1 ಕೋಟಿ 77ಲಕ್ಷದ 36 ಸಾವಿರ ರೂಪಾಯಿ ನಷ್ಟದ ಬಗ್ಗೆ ಅಂದಾಜಿಸಲಾಗಿದೆ.

499 ಪಕ್ಕಾ ಮನೆಗಳಿಂದ 88.31 ಲಕ್ಷ ಹಾಗೂ 256 ಕಚ್ಚಾ ಮನೆಗಳಿಂದ 91.50 ಲಕ್ಷ ಸೇರಿದಂತೆ ಒಟ್ಟು 755 ಮನೆಗಳ ಹಾನಿಯಿಂದ 1 ಕೋಟಿ 79 ಲಕ್ಷದ 81 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ವರದಿ ನೀಡಿದ್ದಾರೆ.

ತಾಲೂಕಿನ ಗ್ರಾಮೀಣ ಭಾಗದಲ್ಲಿ ಮನೆಗೆ ಒತ್ತಿಕೊಂಡಂತೆ ನಿರ್ಮಿಸಲಾಗಿದ್ದ 57 ಕೊಟ್ಟಿಗೆಗಳು ಹಾನಿಗೀಡಾಗಿದ್ದು, 1.72 ಲಕ್ಷದಷ್ಟು ನಷ್ಟವಾಗಿದೆ. ಒಟ್ಟಾರೆಯಾಗಿ ಪಟ್ಟಣ ವ್ಯಾಪ್ತಿಯಲ್ಲಿ 22 ಮನೆಗಳಿಗೆ ಹಾನಿಯಾಗಿದ್ದು, 1 ಕೋಟಿ 17ಲಕ್ಷದ 45 ಸಾವಿರ, ಗ್ರಾಮೀಣ ಭಾಗದಲ್ಲಿ 955 ಮನೆ ಮತ್ತು ಕೊಟ್ಟಿಗೆ ಹಾನಿ ಪ್ರಕರಣಗಳಿಗೆ ಸಂಬಂಧಿಸಿದಂತೆ 3 ಕೋಟಿ, 36 ಲಕ್ಷದ 38 ಸಾವಿರ ರೂಪಾಯಿ ನಷ್ಟ ಸಂಭವಿಸಿದೆ.

ಆಶ್ಲೇಷ ಮಳೆಯಿಂದ ಗ್ರಾಮೀಣ ಭಾಗದಲ್ಲಿ ಅತೀ ಹೆಚ್ಚು ನಷ್ಟ ಸಂಭವಿಸಿದೆ. ಒಟ್ಟಾರೆ 977 ಮನೆ-ಕೊಟ್ಟಿಗೆಗೆ ಹಾನಿಯಾಗಿದ್ದು, 4 ಕೋಟಿ 53 ಲಕ್ಷದ 83 ಸಾವಿರ ರೂಪಾಯಿ ನಷ್ಟವಾಗಿದೆ ಎಂದು ಅಧಿಕಾರಿಗಳು ವರದಿ ತಯಾರಿಸಿದ್ದಾರೆ.

ಈಗಾಗಲೇ ಹಾನಿಗೀಡಾದ ಎಲ್ಲಾ ಪ್ರದೇಶಗಳಿಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಅವರೂ ಸಹ ತಾಲೂಕಿನ ಹಲವಷ್ಟು ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ್ದು, ಸರ್ಕಾರದಿಂದ ನ್ಯಾಯೋಚಿತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕ್ರಮ ವಹಿಸುವಂತೆ ಸಂತ್ರಸ್ತರು ಬೇಡಿಕೆಯಿಟ್ಟಿದ್ದಾರೆ. - ವಿಜಯ್ ಹಾನಗಲ್