ಮಡಿಕೇರಿ, ಆ. 16: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ವಿಪರೀತ ಗಾಳಿ ಸಹಿತ ಭಾರೀ ಮಳೆಯೊಂದಿಗೆ ಎದುರಾಗಿರುವ ಜಲ ಪ್ರವಾಹದ ಹೊಡೆತಕ್ಕೆ ಸಿಲುಕಿ; ಒಂದು ಸಾವಿರದ ನಾಲ್ಕುನೂರ ಅರವತ್ತನಾಲ್ಕು ವಿದ್ಯುತ್ ಕಂಬಗಳು ಇದುವರೆಗೆ ನೆಲಕ್ಕುರುಳಿವೆ. ಅಲ್ಲಲ್ಲಿ ವಿದ್ಯುತ್ ನಿಯಂತ್ರಕ ಟ್ರಾನ್ಸ್‍ಫಾರ್ಮರ್‍ಗಳು 117 ಇದುವರೆಗೆ ಜಖಂಗೊಂಡಿದ್ದು; ಅಂದಾಜು 5.5 ಕಿಲೋ ಮೀಟರ್‍ಗಳಷ್ಟು ವಿದ್ಯುತ್ ತಂತಿಗಳು ನಷ್ಟದೊಂದಿಗೆ; ಇದುವರೆಗೆ ರೂ. 163 ಲಕ್ಷ ಒಟ್ಟು ಚೆಸ್ಕಾಂಗೆ ಹೊರೆಯಾಗಿದೆ.

ಕೊಡಗಿನಲ್ಲಿ ಗ್ರಾಮೀಣ ಪ್ರದೇಶಗಳ ಬಹುತೇಕ ಕುಗ್ರಾಮಗಳಲ್ಲಿ ಕಳೆದ 15 ದಿನಗಳಿಂದ ಗಾಳಿ - ಮಳೆಯ ಹೊಡೆತಕ್ಕೆ ಸಿಲುಕಿ ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದು ಅಲ್ಲಲ್ಲಿ ತಂತಿಗಳು ನೆಲಕಚ್ಚಿರುವ ದೃಶ್ಯ ಎದುರಾಗಿವೆ. ಪರಿಣಾಮ ಸಾಕಷ್ಟು ವಿದ್ಯುತ್ ಕಂಬಗಳು ತುಂಡಾದರೆ; ಟ್ರಾನ್ಸ್‍ಫಾರ್ಮರ್‍ಗಳಲ್ಲಿ ಬೆಂಕಿ ಕಾಣಿಸಿಕೊಂಡು ಸ್ಫೋಟ ಸಂಭವಿಸಿ ಉಪಕರಣಗಳು ಕೆಟ್ಟು ಹೋಗಿವೆ.ಕಾವೇರಿ ಹೊಳೆಯ ಪ್ರವಾಹದಿಂದ ವೀರಾಜಪೇಟೆ - ಮೂರ್ನಾಡು ನಡುವೆ ಬೇತ್ರಿ ಸೇತುವೆ ಬಳಿ ಚೆಸ್ಕಾಂಗೆ ಸಾಕಷ್ಟು ಹಾನಿ ಉಂಟಾಗಿದೆ. ಹೀಗಾಗಿ ಮೂರ್ನಾಡು ಸುತ್ತಮುತ್ತ ವಿದ್ಯುತ್ ಸರಬರಾಜು ಸಾಧ್ಯವಾಗದೆ; ಬೇತ್ರಿ ಸೇತುವೆ ಮುಳುಗಡೆಯಿಂದ ದುರಸ್ತಿ ಕೆಲಸವೂ ಸಾಧ್ಯವಾಗದೆ ಬವಣೆ ಪಡುವಂತಾಗಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಅಂತೆಯೇ ಮಡಿಕೇರಿ ತಾಲೂಕಿನ ಮುಖ್ಯ ಪಟ್ಟಣ ನಾಪೋಕ್ಲು ಹಾಗೂ ಆ ಭಾಗದ ಕಕ್ಕಬ್ಬೆ, ಬಲ್ಲಮಾವಟ್ಟಿ ಮುಂತಾದೆಡೆಗಳಿಗೆ ನಿರಂತರ ವಿದ್ಯುತ್ ಸಮಸ್ಯೆ ಎದುರಾಗಿದ್ದು; ಒಂದೆಡೆ ರಿಪೇರಿ ಮುಗಿಸುವಷ್ಟರಲ್ಲಿ ಮತ್ತೊಂದೆಡೆ ಅನಾಹುತ ಎದುರಾಗುತ್ತಿದೆ ಎಂದು ಮಾಹಿತಿ ಲಭಿಸಿದೆ. ಕೊಂಡಂಗೇರಿ, ಹಾಲುಗುಂದ, ಬಲಮುರಿ, ಕೊಟ್ಟಮುಡಿ, ಬೆಟ್ಟಗೇರಿ, ಪಾಲೂರು ಮುಂತಾದೆಡೆ ಕಾವೇರಿಯ ಪ್ರವಾಹದಿಂದ ಚೆಸ್ಕಾಂಗೆ ವಿಪರೀತ ಹಾನಿ ಉಂಟಾಗಿದೆ. ಜನತೆ ಕೂಡ ವಿದ್ಯುತ್ ಸಮಸ್ಯೆ ಎದುರಿಸುವಂತಾಗಿದೆ.

ಉತ್ತರ ಕೊಡಗಿನ ಮುಕ್ಕೋಡ್ಲು, ಗಾಳಿಬೀಡು, ಕಾಲೂರು ಸುತ್ತಮುತ್ತ ವಿದ್ಯುತ್ ಕಂಬಗಳು ತುಂಡಾಗಿದ್ದು; ಅಲ್ಲಲ್ಲಿ ತಂತಿಗಳ ಮೇಲೆ ಮರಗಳು ಬಿದ್ದಿರುವ ಕಾರಣ; ಚೆಸ್ಕಾಂ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೇಲಿಂದ ಮೇಲೆ ಸರಿಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಕಾರಣ ಮುಕ್ಕೋಡ್ಲು, ಹಚ್ಚಿನಾಡು, ಹಮ್ಮಿಯಾಲ, ಮುಟ್ಲು ಮುಂತಾದೆಡೆಗಳಲ್ಲಿ ಗ್ರಾಹಕರು ತೊಂದರೆಯಲ್ಲಿದ್ದಾರೆ ಎಂದು ಮಾಹಿತಿ ಲಭಿಸಿದೆ.

ಈ ನಡುವೆ ಜಿಲ್ಲಾ ಕೇಂದ್ರ ಮಡಿಕೇರಿ, ಸುಂಟಿಕೊಪ್ಪ, ಕುಶಾಲನಗರ ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಪೂರೈಸಲು ಪ್ರಯತ್ನ ನಡೆದಿದೆ ಎಂದು ವಿವರಿಸಿರುವ ಇಲಾಖೆ ಮಂದಿ; ಮಡಿಕೇರಿ ಸುತ್ತಮುತ್ತಲಿನ ಗ್ರಾಮಾಂತರ ಜನತೆ ಆಗಿಂದಾಗ್ಗೆ ವಿದ್ಯುತ್ ಸಮಸ್ಯೆ ಯಲ್ಲಿ ಸಿಲುಕಿ; ಇಲಾಖೆಯ ನೆರವಿಗೆ ಸಂಪರ್ಕಿಸುತ್ತಿದ್ದಾರೆ. (ಮೊದಲ ಪುಟದಿಂದ) ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ದಿನವಿಡೀ ವಿದ್ಯುತ್ ಕಲ್ಪಿಸಲು ಶ್ರಮಿಸುತ್ತಿದ್ದಾರೆ ಎಂದು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಮೂರು ತಾಲೂಕುಗಳಿಗೆ ಸಂಬಂಧಿಸಿದಂತೆ ಚೆಸ್ಕಾಂ ಅಧಿಕಾರಿಗಳೊಂದಿಗೆ ಸುಮಾರು 365 ಸಿಬ್ಬಂದಿ ಹಗಲಿರುಳು ವಿದ್ಯುತ್ ಮಾರ್ಗದ ತೊಂದರೆ ನಿವಾರಿಸಿ; ಜನರಿಗೆ ಬೆಳಕು ಕಲ್ಪಿಸಲು ಕಾರ್ಯೋನ್ಮುಖರಾಗಿದ್ದು; 110 ಮಂದಿ ತಾತ್ಕಾಲಿಕ ನೌಕರರ ಸಹಿತ ಒಟ್ಟು 475 ಜನರು ಕರ್ತವ್ಯನಿರತರಾಗಿದ್ದಾರೆ.

ಕೆಲವೊಮ್ಮೆ ಮರದ ರೆಂಬೆಗಳು ಇತ್ಯಾದಿ ಬಿದ್ದಾಗ ತಕ್ಷಣ ವಿದ್ಯುತ್ ಕಡಿತಗೊಳ್ಳುವದರಿಂದ; ನೌಕರರಿಗೆ ನಿರ್ದಿಷ್ಟ ಸ್ಥಳವನ್ನು ಪತ್ತೆ ಹಚ್ಚಿ ದುರಸ್ತಿ ಕಾರ್ಯದೊಂದಿಗೆ ಮರು ಸಂಪರ್ಕ ಕಲ್ಪಿಸಲು ಕಾಲಾವಕಾಶ ತೆಗೆದುಕೊಳ್ಳಲಾಗುತ್ತಿದೆ ಎಂದು ಕಿರಿಯ ಅಭಿಯಂತರ ಸಂಪತ್ ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಇಡೀ ಜಿಲ್ಲೆಯ ಉದ್ದಗಲಕ್ಕೂ; ದಕ್ಷಿಣಕೊಡಗಿನ ಲಕ್ಷ್ಮಣ ತೀರ್ಥ ಪ್ರವಾಹ ಪೀಡಿತ ಪ್ರದೇಶಗಳು ಹಾಗೂ ಕಾವೇರಿ ನದಿಪಾತ್ರದ ಮುಳುಗಡೆ ಗ್ರಾಮಗಳಲ್ಲಿ ಸಂಪರ್ಕ ಒದಗಿಸಲು ಸಮಯಾವಕಾಶ ಅನಿವಾರ್ಯ ಎಂದು ಚೆಸ್ಕಾಂ ಆರ್ಥಿಕ ಅಧಿಕಾರಿ ದೇವಯ್ಯ ಅಭಿಪ್ರಾಯಪಟ್ಟಿದ್ದಾರೆ.

ಇಂತಹ ಸಂದರ್ಭ ಗ್ರಾಹಕರು ಕ್ರೋಧಗೊಂಡು ಮಾತನಾಡುತ್ತಿದ್ದು; ಕೆಲವೆಡೆ ಇಲಾಖೆಯೊಂದಿಗೆ ಉಬಯಕಡೆ ಮಾತಿನ ಚಕಮಕಿಗೂ ಕಾರಣವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರಲ್ಲದೆ; ಪರಸ್ಪರ ಸಹಕಾರದಿಂದ ಜಿಲ್ಲೆಯೆಲ್ಲೆಡೆ ಎದುರಾಗಿರುವ ತೊಂದರೆ ಸರಿಪಡಿಸಲು ಜನತೆ ಇಲಾಖೆಯೊಂದಿಗೆ ಕೈಜೋಡಿಸುವಂತೆ ಕಳಕಳಿ ವ್ಯಕ್ತಪಡಿಸಿದ್ದಾರೆ.