ನಾಪೋಕ್ಲು, ಆ. 16: ಕಳೆದ ವಾರ ಸುರಿದ ಧಾರಾಕಾರ ಮಳೆ ಯಿಂದಾಗಿ ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಗ್ರಾಮದ ಮಂಜಟ್ ಕಾಲೋನಿಯಲ್ಲಿ ರಸ್ತೆ ಸಂಪೂರ್ಣ ಹಾನಿಗೀಡಾಗಿದ್ದು, ಸಂಚಾರ ಅಸಾಧ್ಯವಾಗಿದೆ.
ಗಾಳಿ ಸಹಿತ ಸುರಿದ ಮಳೆಗೆ ಮನೆಗಳ ಸಮೀಪ ಮಣ್ಣು ಕುಸಿತಗೊಂಡ ಪರಿಣಾಮ ಗ್ರಾಮದ ಹಲವು ಮನೆಗಳು ಹಾನಿಗೀಡಾಗಿದ್ದು, ಮನೆ ಕಳೆದುಕೊಂಡ ಕುಟುಂಬಗಳು ಬಲ್ಲಮಾವಟಿಯ ಹರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದಾರೆ. ಈ ಕುರಿತು ಮಂಜಟ್ ಕಾಲೋನಿಯ ನಿವಾಸಿಗಳಾದ ಪಿ.ಎಂ. ಪೂಣಚ್ಚ, ಮನು ಮತ್ತಿತರರು ಮಾತನಾಡಿ, ಮಳೆಯಿಂದಾಗಿ ಹಾನಿಗೀಡಾಗಿರುವ ಮನೆಗಳನ್ನು ದುರಸ್ತಿಪಡಿಸುವದರೊಂದಿಗೆ ಗ್ರಾಮದ ರಸ್ತೆಯನ್ನು ಸರಿಪಡಿಸಿಕೊಡಬೇಕೆಂದು ಒತ್ತಾಯಿಸಿದ್ದಾರೆ.