ಗೋಣಿಕೊಪ್ಪಲು.ಆ.16 : ಯುವತಿಯರಿಬ್ಬರು ಹೊಳೆಗೆ ಕೈ ಕಾಲು ತೊಳೆಯಲು ತೆರಳಿದ ಸಂದರ್ಭ ಆಕಸ್ಮಿಕ ಕಾಲುಜಾರಿ ನೀರು ಪಾಲಾದ ಘಟನೆ ತಿತಿಮತಿ ಸಮೀಪದ ದೇವ ಮಚ್ಚಿ ಅಕ್ಕೆಮಾಳ ಸಮೀಪ ನಡೆದಿದೆ.ಇಂದು ಮಧ್ಯಾಹ್ನ ಈ ಘಟನೆ ನಡೆದಿದೆ. ಮೃತ ಪಟ್ಟ ಯುವತಿ ಮಲ್ಲ ಮತ್ತು ಪಾರ್ವತಿ ದಂಪತಿಯ ಪುತ್ರಿ ಯಾದ ಕಾವ್ಯ (20) ಹಾಗೂ ಈಕೆಯ ಸ್ನೇಹಿತೆ ಬಂಧುವಾಗಿರುವ ಅಪ್ಪಣ್ಣ ಮಂಜುಳರವರ ಪುತ್ರಿ ಭವ್ಯ(10) ಎಂದು ತಿಳಿದು ಬಂದಿದೆ. 10 ವರ್ಷ ಪ್ರಾಯದ ಭವ್ಯ ಮೊದಲಿಗೆ ಹೊಳೆಗೆ ಇಳಿದಿದ್ದಾಳೆ ಎನ್ನಲಾಗಿದೆ. ಈ ಸಂದರ್ಭ ಬಾಲಕಿ ಕಾಲು ಜಾರಿದನ್ನು ಕಂಡು ಈಕೆಯ ರಕ್ಷಣೆಗೆ ಮುಂದಾದ ಮತ್ತೋರ್ವ ಯುವತಿ ನವ್ಯ ಎಂಬವಳು ಹೊಳೆಗೆ ಇಳಿದಿದ್ದಾಳೆ. ಈಕೆಯ ರಕ್ಷಣೆಗೆ ಹೋದ ಯುವತಿ ಕಾವ್ಯ ಆಯಾ ತಪ್ಪಿದ್ದರಿಂದ ಹೊಳೆಯಲ್ಲಿ ಮುಳುಗಿ ಹೋಗಿದ್ದಾಳೆ.ಅದೃಷ್ಟಾವಶಾತ್ ಭವ್ಯಳನ್ನು ಉಳಿಸಲು ತೆರಳಿದ ನವ್ಯ ಅನತಿ ದೂರದಲ್ಲಿದ್ದ ಬಿದಿರಿನ ಸಹಾಯದಿಂದ ಬಚಾವಾಗಿದ್ದಾಳೆ.

(ಮೊದಲ ಪುಟದಿಂದ) ಜೊತೆಯಲ್ಲಿದ್ದ ಯುವತಿಯರು ಮನೆಯವರಿಗೆ ಸುದ್ದಿ ತಿಳಿಸಿದ್ದಾರೆ. ನಂತರ ಹೊಳೆ ಸಮೀಪ ಬಂದು ಮನೆಯವರು ಹುಡುಕಾಟ ನಡೆಸಿದಾಗ ಹೊಳೆಯಲ್ಲಿ ಯುವತಿ ಕಾವ್ಯಳ ಮೃತ ದೇಹ ತೇಲುತ್ತಿದ್ದುದು ಕಂಡು ಬಂದಿದೆ. ನಂತರದಲ್ಲಿ ಸ್ಥಳಕ್ಕೆ ಆಗಮಿಸಿದ ಗೋಣಿಕೊಪ್ಪ ಅಗ್ನಿಶಾಮಕ ದಳದವರು ಒಂದೂವರೆ ಗಂಟೆಗಳ ಕಾಲ ಹುಡುಕಾಟ ನಡೆಸಿ ಭವ್ಯಳ ಮೃತದೇಹವನ್ನು ಹೊರತೆಗೆದಿದ್ದಾರೆ. ಸುದ್ದಿ ತಿಳಿದ ಪೊನ್ನಂಪೇಟೆ ಠಾಣೆಯ ಠಾಣಾಧಿಕಾರಿ ಮಹೇಶ್ ನೇತೃತ್ವದಲ್ಲಿ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ.ಗ್ರಾಮದ ಜನತೆ ಸಾಗರೋಪಾದಿಯಲ್ಲಿ ಹೊಳೆಯ ದಂಡೆಯ ಮೇಲೆ ನೆರೆದಿದ್ದರು.ತಾಲೂಕು ಆಡಳಿತ ಪರವಾಗಿ ರೆವಿನ್ಯೂ ಅಧಿಕಾರಿಗಳಾದ ಮಂಜುನಾಥ್, ಗ್ರಾಮ ಸಹಾಯಕರು ಹಾಜರಿದ್ದರು.

ಶಾಸಕರ ಭೇಟಿ

ಹೊಳೆಯಲ್ಲಿ ಮುಳುಗಿ ಮೃತಪಟ್ಟ ಬಾಲಕಿಯರ ನಿವಾಸಕ್ಕೆ ಶಾಸಕ ಕೆ.ಜಿ. ಬೋಪಯ್ಯ ಭೇಟಿ ನೀಡಿ ಸಾಂತ್ವನ ಹೇಳಿದರು. ತಹಶೀಲ್ದಾರ್ ಪುರಂದರ ಅವರನ್ನು ಸ್ಥಳಕ್ಕೆ ಕರೆಸಿ ಮೃತರ ಶವ ಸಂಸ್ಕಾರಕ್ಕೆ ತಲಾ ರೂ. 5 ಸಾವಿರ ನೀಡಬೇಕು ಎಂದು ಸೂಚಿಸಿದ ಮೇರೆಗೆ ತಹಶೀಲ್ದಾರ್ ಪುರಂದರ ಕ್ರಮ ಕೈಗೊಂಡರು.

ಕೂಡಲೇ ಶವ ಸಂಸ್ಕಾರಕ್ಕೆ ರೂ. 5 ಸಾವಿರ ತುರ್ತು ಪರಿಹಾರ ಹಾಗೂ ರೂ. 5 ಲಕ್ಷದ ಚೆಕ್ ಅನ್ನು ಪರಿಹಾರವಾಗಿ ಶಾಸಕರು ವಿತರಿಸಿದರು. ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಸಿ.ಕೆ.ಬೋಪಣ್ಣ, ಸದಸ್ಯೆ ಪಿ.ಆರ್.ಪಂಕಜಾ, ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ್, ಮಡಿಕೇರಿ ಆರ್‍ಎಂಸಿ ಅಧ್ಯಕ್ಷ ಅಂಬಿ ಕಾರ್ಯಪ್ಪ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ದೇವಯ್ಯ ಹಾಜರಿದ್ದರು.

-ಹೆಚ್.ಕೆ.ಜಗದೀಶ್, ಎನ್.ಎನ್. ದಿನೇಶ್, ಸುದ್ದಿಪುತ್ರ