ನಾಪೋಕ್ಲು, ಆ. 16: ವಾರದ ಹಿಂದೆಯಷ್ಟೇ ಸ್ವಂತ ಸೂರಿನಲ್ಲಿ ನೆಮ್ಮದಿಯ ಬದುಕು ಕಟ್ಟಿಕೊಂಡಿದ್ದ ಮಂದಿ ಇಂದು ಪರಿಹಾರ ಕೇಂದ್ರದಲ್ಲಿ ಉಟ್ಟಬಟ್ಟೆಯಲ್ಲಿ ದಿನದೂಡುತ್ತಿದ್ದಾರೆ. ಕಣ್ಣೀರ ಹೊರತಾಗಿ ಬೇರೇನೂ ಉಳಿದಿಲ್ಲ. ಅಲ್ಲಿರುವವರಿಗೆಲ್ಲಾ ಕಾಡುತ್ತಿರುವ ಏಕೈಕ ಪ್ರಶ್ನೆ ಅಂದರೇ ಮುಂದೇನು? ಇದು ನಾಪೋಕ್ಲುವಿನ ಜೂನಿಯರ್ ಕಾಲೇಜಿನ ಪರಿಹಾರ ಕೇಂದ್ರದಲ್ಲಿ ಕಂಡುಬಂದ ದೃಶ್ಯ. ಕಳೆದ ವಾರ ಸುರಿದ ಮಹಾಮಳೆಯಿಂದಾಗಿ ಉಕ್ಕಿ ಹರಿದ ಕಾವೇರಿ ಪ್ರವಾಹ ನಾಪೋಕ್ಲು ವ್ಯಾಪ್ತಿಯಲ್ಲಿ ಮನೆ-ಮಠ ಸೇರಿದಂತೆ ಕೃಷಿ ಪ್ರದೇಶಗಳನ್ನು ಅಪೋಷಣೆ ಪಡೆದುಕೊಂಡಿದೆ. ನದಿ ಪ್ರವಾಹದಿಂದಾಗಿ ಎಲ್ಲವನ್ನೂ ಕಳೆದುಕೊಂಡ ಮಂದಿ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ನಾಪೋಕ್ಲು ಬಳಿಕ ಚೆರಿಯಪರಂಬುವಿನಲ್ಲಿ ಪ್ರವಾಹದ ರುದ್ರನರ್ತನಕ್ಕೆ ಬಹುತೇಕ ಮನೆಗಳು ನಾಮಾವಶೇಷಗೊಂಡಿದ್ದು, ಪ್ರವಾಹ ಇಳಿದ ಬಳಿಕ ತಮ್ಮ ಮನೆಗಳನ್ನು ವೀಕ್ಷಿಸಿದ ಮಂದಿ ಅಕ್ಷರಶಃ ತಲ್ಲಣಗೊಂಡಿದ್ದಾರೆ. ಏಕೆಂದರೆ ಅಲ್ಲಿ ಮನೆಗಳ ಬದಲಿಗೆ ಕುಸಿದ ಗೋಡೆಗಳು, ಮುರಿದು ಬಿದ್ದ ಮೇಲ್ಛಾವಣಿ ಮಾತ್ರ ಸಾಕ್ಷಿಯಾಗಿವೆ. ಆಧಾರ್ ಕಾರ್ಡ್ ಸೇರಿದಂತೆ ಬಹುಮುಖ್ಯ ದಾಖಲಾತಿಗಳು ನೀರಿನಲ್ಲಿ ಕೊಚ್ಚಿಹೋಗಿವೆ. ನಾಪೋಕ್ಲು ಜೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರದಲ್ಲಿ ಇದೀಗ ಬಲ್ಲಮಾವಟಿಯ ನಾಲ್ಕು ಮಂದಿ ಭವಿಷ್ಯದ ಬದುಕಿಗಾಗಿ ಹಂಬಲಿಸುತ್ತಿದ್ದಾರೆ.