ಗೋಣಿಕೊಪ್ಪಲು, ಆ. 14: ವೀರಾಜಪೇಟೆ ತಾಲೂಕು ದೈವಜ್ಞ ಬ್ರಾಹ್ಮಣರ ಸಂಘದ ವತಿಯಿಂದ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದ ನೊಂದ ಕುಟುಂಬಗಳಿಗೆ ಕಂಬಳಿ, ಚಾಪೆ ಹಾಗೂ ಬೆಡ್‍ಶೀಟ್‍ಗಳನ್ನು ವಿತರಿಸಲಾಯಿತು. ಮಳೆಯಿಂದ ತೀವ್ರ ತೊಂದರೆಗೀಡಾದ ಮನೆಗಳಿಗೆ ಖುದ್ದಾಗಿ ತೆರಳಿದ ಸಂಘದ ಸದಸ್ಯರು ವಸ್ತುಗಳನ್ನು ವಿತರಿಸಿದರು. ಗೋಣಿಕೊಪ್ಪಲುವಿನ ನಾಲ್ಕನೇ ವಿಭಾಗ, ಎರಡನೇ ವಿಭಾಗ ಹಾಗೂ ಆರನೇ ವಿಭಾಗದ ಆಯ್ದ ಮನೆಗಳಿಗೆ ತೆರಳಿ ಸವಲತ್ತುಗಳನ್ನು ನೀಡಲಾಯಿತು.
ನೊಂದ ಕುಟುಂಬಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ವೀರಾಜಪೇಟೆ ತಾಲೂಕು ದೈವಜ್ಞ ಬ್ರಾಹ್ಮಣರ ಸಂಘದ ಅಧ್ಯಕ್ಷ ಎಂ.ಜಿ. ಕಾಂತರಾಜ್, ನಗರದಲ್ಲಿರುವ ಏಕೈಕ ಕೀರೆಹೊಳೆಯ ಸತತ ಒತ್ತುವರಿಯಿಂದ ನೀರು ಸುಗಮವಾಗಿ ಹರಿಸಲು ಸಾಧ್ಯವಾಗದ ಕಾರಣ ಪ್ರವಾಹದಂತಹ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಭವಿಷ್ಯದ ದೃಷ್ಟಿಯಿಂದ ಜಿಲ್ಲಾಡಳಿತ ನದಿ ದಂಡೆಯ ಒತ್ತುವರಿದಾರರನ್ನು ತೆರವುಗೊಳಿಸಿ ನದಿಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ವೀರಾಜಪೇಟೆ ತಾಲೂಕು ದೈವಜ್ಞ ಬ್ರಾಹ್ಮಣರ ಸಂಘದ ಉಪಾಧ್ಯಕ್ಷ ರವಿ ಶಾನು, ಮಾಜಿ ಅಧ್ಯಕ್ಷ ಎ.ವಿ. ವೆಂಕಟೇಶ್, ಕಾರ್ಯದರ್ಶಿ ರಾಘು ಮಂಜುನಾಥ್, ಪದಾಧಿಕಾರಿಗಳಾದ ಎಂ.ಎಸ್. ನಾಗೇಶ್, ಬಿ.ಪಿ. ಹರೀಶ್, ಹೆಚ್.ಜಿ. ನಾಗರಾಜ್, ಸದಸ್ಯರಾದ ಸನತ್‍ಕುಮಾರ್, ಕಿರಣ್, ನಿತ್ಯಾನಂದ, ಜಗದೀಶ್, ಶರತ್, ಹೆಚ್.ಜಿ. ಉಮೇಶ್ ಹಾಗೂ ಗ್ರಾ.ಪಂ. ಸದಸ್ಯರಾದ ರಾಜಶೇಖರ್ ಹಾಗೂ ಸುಲೈಕಾ ಉಪಸ್ಥಿತರಿದ್ದರು.