ಮಡಿಕೇರಿ, ಆ. 14: ಭಾರತೀಯರು ಸ್ವಾತಂತ್ಯ್ರದ ಸಂಭ್ರಮಾಚರಣೆಯನ್ನು ಮಾಡಬೇಕಾದರೆ ಅಖಂಡ ಭಾರತ ನಮ್ಮದಾಗಿರಬೇಕು. ದೇಶದೆಲ್ಲೆಡೆ ಸಂಭ್ರಮಾಚರಣೆ ನಡೆಯಬೇಕಾದರೆ ನಾವು ಸ್ವಾಭಿಮಾನದಿಂದ ಹರಿದು ಹಂಚಿಹೋಗಿರುವ ದೇಶವನ್ನು ಒಂದುಗೂಡಿಸಿ ಭಾರತಕ್ಕೆ ಮರಳಿ ಪಡೆಯಬೇಕಿದೆ. ಆ ಮಹತ್ಕಾರ್ಯವನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಸಾಧಿಸಿದ್ದಾರೆ ಎಂದು ಕೇರಳದ ಐಕ್ಯವೇದಿ ನಿಕಟಪೂರ್ವ ಉಪಾಧ್ಯಕ್ಷ ರವೀಶ್ ತಂತ್ರಿ ಹೇಳಿದರು.ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಎಸ್.ಕೆ.ಎಸ್. ವಿದ್ಯಾಪೀಠದಲ್ಲಿ ಅಖಂಡ ಭಾರತ ಸಂಕಲ್ಪ ದಿನದ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದ ಅವರು, ನಾಸ್ತಿಕರಿಗೆ ದೇಶಭಕ್ತಿ ಇರುವದಿಲ್ಲ. ಭಾರತದ ಆಂತರಿಕ ಸಂಪನ್ಮೂಲವನ್ನು ಅರಿಯದೆ ಹಿಂದೂಗಳ ಭಾವನೆಗಳ ಮೇಲೆ ಆಕ್ರಮಣ ಮಾಡುತ್ತಿರುವವರ ವಿರುದ್ಧ ಹೋರಾಡಬೇಕಿದೆ ಎಂದರು.
ನೀರಗುಂದ ಮೂಲದ ಬೆಂಗಳೂರಿನ ಎನ್.ಎಂ. ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಹಾಸನ ರಸ್ತೆಯ ಶ್ರೀ ಗಣಪತಿ ದೇವಸ್ಥಾನದಿಂದ ಆರಂಭಗೊಂಡ ಪಂಜಿನ ಮೆರವಣಿಗೆ ನಗರದ ಮುಖ್ಯ ಬೀದಿಗಳಲ್ಲಿ ಸಾಗಿ ಸಭಾ ಮಂಟಪವನ್ನು ತಲಪಿತು. ವೇದಿಕೆಯಲ್ಲಿ ಕಿರಿಕೊಡ್ಲಿ ಮಠದ ಶ್ರೀ ಸದಾಶಿವ ಸ್ವಾಮೀಜಿ, ಕಲ್ಲುಮಠಾಧ್ಯಕ್ಷ ಶ್ರೀ ಮಹಾಂತ ಸ್ವಾಮೀಜಿ, ಜಾಗರಣಾ ವೇದಿಕೆಯ ಜಿಲ್ಲಾಧ್ಯಕ್ಷ ಸುಭಾಷ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಉಮೇಶ್, ಕೊಡ್ಲಿಪೇಟೆ ಹೋಬಳಿ ಪ್ರಧಾನ ಕಾರ್ಯದರ್ಶಿ ಅನುಜ ಇದ್ದರು.