ಕೂಡಿಗೆ, ಆ. 14 : ಹಾರಂಗಿ ಅಚ್ಚುಕಟ್ಟು ಪ್ರದೇಶದಲ್ಲಿ ತಡವಾಗಿ ಮಳೆ ಬಿದ್ದ ಪರಿಣಾಮ ಹಾಗೂ ಹಾರಂಗಿ ಅಣೆಕಟ್ಟೆಯಿಂದ ನೀರನ್ನು ಸ್ಪಲ್ಪ ಪ್ರಮಾಣದಲ್ಲಿ ಹರಿಸಿದ ಪರಿಣಾಮ ಜಲಾನಯನ ಪ್ರದೇಶದ ರೈತರು ಭತ್ತದ ಮಡಿಗಳನ್ನು ಸಿದ್ಧಗೊಳಿಸಿಕೊಂಡು ನಾಟಿ ಮಾಡದೆ ಸ್ಥಗಿತಗೊಳಿಸಿದ್ದರು. ಹಾರಂಗಿ ಅಣೆಕಟ್ಟೆಯಿಂದ ಮುಖ್ಯ ನಾಲೆಗೆ ನೀರು ಹರಿಸಿದ ನಂತರ ಇದೀಗ ಶೇ.60 ರಷ್ಟು ಭಾಗ ಮಾತ್ರ ನಾಟಿ ಕಾರ್ಯ ಆಗಿದೆ. ಇದೀಗ ಹಾರಂಗಿ ನೀರಾವರಿ ಇಲಾಖೆಯವರು ಉಪ ನಾಲೆಗಳಿಗೆ ನೀರನ್ನು ಹರಿಸುತ್ತಿರುವದರಿಂದ ಹುದುಗೂರಿನಿಂದ ಶಿರಂಗಾಲದವರೆಗೆ ಕೆಲವು ರೈತರು ಈಗಲೂ ಸಸಿ ಮಡಿಗಳನ್ನು ಸಿದ್ಧಗೊಳಿಸಲು ಬಿತ್ತನೆ ಭತ್ತದ ಬೀಜಗಳನ್ನು ಹಾಕುತ್ತಿದ್ದಾರೆ. ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಉಪನಾಲೆಗಳಲ್ಲಿ ನೀರು ಹರಿಯುತ್ತಿರುವದರಿಂದ ಈ ಭಾಗದ ಕೆಲವು ರೈತರು ಕೃಷಿ ಭೂಮಿಯನ್ನು ಉಳುಮೆ ಮಾಡಿ, ನಾಟಿ ಕಾರ್ಯಕ್ಕೆ ಮುಂದಾಗಿರುವದು ಕಂಡುಬರುತ್ತಿದೆ.

ಸಹಕಾರ ಸಂಘಗಳಿಂದಲೂ ರೈತರಿಗೆ ವಿತರಿಸಲು ದಾಸ್ತಾನು ಇರಿಸಲಾಗಿದ್ದ ವಿವಿಧ ತಳಿಗಳ ಭತ್ತದ ಬಿತ್ತನೆ ಬೀಜಗಳ ಮಾರಾಟದ ಪ್ರಮಾಣ ಕಡಿಮೆಯಾಗಿದೆ. ಇದರ ಜೊತೆಯಲ್ಲಿ ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚು ಜೋಳ ಬೆಳೆಯುವದರಿಂದ ಜೋಳ ಬಿತ್ತನೆ ಮಾಡುವ ಸಮಯದಲ್ಲಿಯೂ ಮಳೆಯು ಬೀಳದ ಪರಿಣಾಮ ಸಹಕಾರ ಸಂಘಗಳಲ್ಲಿ ಜೋಳ ಬಿತ್ತನೆ ಬೀಜಗಳು ಮಾರಾಟವಾಗಿರುವದು ಕಡಿಮೆಯಾಗಿದೆ.

ಸೋಮವಾರಪೇಟೆ ತಾಲೂಕು ಸಹಾಯಕ ಕೃಷಿ ನಿರ್ದೇಶಕ ಹೆಚ್.ಎಸ್.ರಾಜಶೇಖರ್ ಅವರು ಕುಶಾಲನಗರ ಹೋಬಳಿ ವ್ಯಾಪ್ತಿಯ ಜಲಾವೃತವಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಪಡೆದಿದ್ದಾರೆ. ನಂತರ ಮಾತನಾಡಿದ ಅವರು ಈಗಾಗಲೇ ಬೆಳೆ ನಷ್ಟವಾಗಿರುವವರ ಮಾಹಿತಿ ಪಡೆದು, ಜಿಲ್ಲಾಡಳಿತಕ್ಕೆ ಮತ್ತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತಿದೆ. ಸರ್ಕಾರದ ಸೂಚನೆಯನ್ವಯ ಪರಿಹಾರ ಒದಗಿಸುವಲ್ಲಿ ಕಾರ್ಯೋನ್ಮುಖರಾಗುತ್ತೇವೆ. ಅಲ್ಲದೆ, ನಾಟಿ ಮಾಡಿದ ರೈತರಿಗೆ ಕಳೆನಾಶಕ ಮತ್ತು ಇನ್ನಿತರ ಔಷಧಿಗಳು, ಗೊಬ್ಬರ ಸಹಕಾರ ಸಂಘದಲ್ಲಿ ದಾಸ್ತಾನಿದ್ದು, ದಾಖಲಾತಿಗಳನ್ನು ನೀಡಿ ರಿಯಾಯಿತಿ ದರದಲ್ಲಿ ಕೀಟನಾಶಕ, ಕಳೆನಾಶಕಗಳನ್ನು ಪಡೆಯಬಹುದೆಂದು ತಿಳಿಸಿದರು. - ಕೆ.ಕೆ.ಎಸ್. ಶೆಟ್ಟಿ