ಪೊನ್ನಂಪೇಟೆ, ಆ. 14: ಕಳೆದ ಕೆಲ ದಿನಗಳಿಂದ ಸುರಿದ ಧಾರಾಕಾರ ಮಳೆ ಮತ್ತು ಭಾರೀ ಗಾಳಿಯಿಂದಾಗಿ ದ.ಕೊಡಗಿನ ಭಾಗದಲ್ಲಿ ಕೃಷಿ ಚಟುವಟಿಕೆಗಳಿಗೆ ಭಾರೀ ಹಿನ್ನಡೆಯಾಗಿದೆ. ಅದರಲ್ಲೂ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೊನ್ನಂಪೇಟೆ ತಾಲೂಕಿನ ಬಹುತೇಕ ಭಾಗಗಳಲ್ಲಿ ರೈತರ ಬದುಕಿನಾಧಾರವಾಗಿದ್ದ ಕೃಷಿ ಸಂಪೂರ್ಣವಾಗಿ ತತ್ತರಿಸಿದ್ದು, ಹಲವೆಡೆ ಫಸಲು ನೆಲಕಚ್ಚಿಹೋಗಿದೆ.

ಕಳೆದ ವಾರ ಬಿದ್ದ ಮಹಾಮಳೆಗೆ ದ.ಕೊಡಗಿನ ಬಾಡಗರಕೇರಿ ಸಮೀಪದ ಪೋರಾಡು ಗ್ರಾಮದಲ್ಲಿ ಮಾಡಲಾಗಿದ್ದ 20 ಏಕ್ರೆ ಬಾಳೆ ಕೃಷಿಯ ಪೈಕಿ ಬಹುತೇಕ ಪ್ರಮಾಣದ ಬಾಳೆಗಿಡ ಸಂಪೂರ್ಣವಾಗಿ ನೆಲಕಚ್ಚಿದ್ದು ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಮಹಾಮಳೆಯ ಸಂದರ್ಭದಲ್ಲಿ ಬೀಸಿದ ಭಾರೀ ಗಾಳಿ ಫಸಲು ಬಿಟ್ಟು ಕಟಾವಿನ ಹಂತದಲ್ಲಿದ್ದ ಬಾಳೆಗೊನೆಯನ್ನು ಗಿಡ ಸಹಿತ ನೆಲಕ್ಕುರುಳಿಸಿ ತನ್ನ ರೌದ್ರತೆಯನ್ನು ಮೆರೆದಿದೆ.

ಹರಿಹರ ಗ್ರಾಮದ ತೀತಿರ ಧರ್ಮಜ ಉತ್ತಪ್ಪ ಅವರು ಕೇರಳದ ಕೃಷಿಕ ಜೋಸ್ ಎಂಬವರ ಜೊತೆ ಪಾಲುದಾರಿಕೆಯೊಂದಿಗೆ ಪೋರಾಡು ಗ್ರಾಮದಲ್ಲಿ 20 ಎಕರೆ ಪ್ರದೇಶದಲ್ಲಿ ಉತ್ತಮ ತಳಿಯ ನೇಂದ್ರ ಬಾಳೆಯ ಕೃಷಿ ಮಾಡಿದ್ದರು.

ಕಳೆದ ವರ್ಷದ ಮೇ ತಿಂಗಳಿನಲ್ಲಿ ನೆಡಲಾಗಿದ್ದ ಬಾಳೆ, ಇದೀಗ ಕಟಾವಿನ ಹಂತ ಸಮೀಪಿಸಿತ್ತು. ಈ ವೇಳೆ ಉಂಟಾದ ಅತಿವೃಷ್ಟಿಯಿಂದಾಗಿ ಆದಾಯದ ನಿರೀಕ್ಷೆಯಲ್ಲಿ ಬಾಳೆ ಕೃಷಿಗಾಗಿ ಹೂಡಲಾಗಿದ್ದ ಬಂಡವಾಳ ಪೂರ್ಣವಾಗಿ ನೀರು ಪಾಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ತೀತಿರ ಧರ್ಮಜ ಉತ್ತಪ್ಪ ಅವರು, ಕೊಡಗಿನಲ್ಲಿಯೇ ಮಾದರಿಯಾಗಿ ಈ ನೇಂದ್ರಬಾಳೆ ಕೃಷಿ ಮೂಡಿಬಂದಿತ್ತು. ಆದರೆ ಈ ಅತಿವೃಷ್ಟಿ ಇಡೀ ಕೃಷಿಯನ್ನೆ ನೆಲಕಚ್ಚಿಸಿ ನಮ್ಮೆಲ್ಲಾ ಕನಸುಗಳನ್ನು ನುಚ್ಚು ನೂರಾಗಿಸಿಬಿಟ್ಟಿದೆ. ಇದರಿಂದ ನಮಗೆ 18 ಲಕ್ಷಕ್ಕೂ ಹೆಚ್ಚಿನ ಪ್ರಮಾಣದ ಹಾನಿ ಉಂಟಾಗಿದೆ. ಇದು ನಮ್ಮಿಂದ ಸಹಿಸಲು ಅಸಾದ್ಯ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಮುಂದಿನ ತಿಂಗಳು ಕೇರಳದಲ್ಲಿ ಓಣಂ ಹಬ್ಬವಿರುವದರಿಂದ ನೇಂದ್ರ ಬಾಳೆಗೆ ಹೆಚ್ಚಿನ ಬೇಡಿಕೆಯಿರುತ್ತಿತ್ತು. ಆದರೆ ಅತಿವೃಷ್ಟಿಯಿಂದಾಗಿ ಬಾಳೆಗೊನೆಗಳೆಲ್ಲಾ ನೆಲಕ್ಕುರುಳಿವೆ. ನೆಲಕಚ್ಚಿದ ಗೊನೆಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ. ಅಲ್ಲದೆ ಈ ರೀತಿಯ ಗೊನೆಗಳನ್ನು ಯಾರೂ ಖರೀದಿಸುವದಿಲ್ಲ. ಇದೀಗ ಕಟಾವಿನ ಪೂರ್ಣ ಹಂತ ತಲಪಿಲ್ಲದ ಕಾರಣದಿಂದಾಗಿ ನೆಲಕಚ್ಚದೆ ಇರುವ ಅಲ್ಪ ಸ್ವಲ್ಪ ಪ್ರಮಾಣದ ಬಾಳೆಗೊನೆಗಳನ್ನು ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಇದರಿಂದಾಗಿ ಸಾಲ ಮಾಡಿ ಹಾಕಿದ ಬಂಡವಾಳದ ಹಣ ಶೇ.10 ರಷ್ಟು ಕೂಡ ದೊರೆಯುವದಿಲ್ಲ. ಇದರಿಂದ ದಿಕ್ಕೇ ತೋಚದಂತಾಗಿದೆ ಎಂದು ಧರ್ಮಜ ಉತ್ತಪ್ಪ ನೋವು ಹೇಳಿಕೊಂಡರು.

-ರಫೀಕ್ ತೂಚಮಕೇರಿ