ಒಡೆಯನಪುರ, ಆ. 14: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶನಿವಾರಸಂತೆ ‘ಬಿ’ ಒಕ್ಕೂಟದ ವತಿಯಿಂದ ಸಮೀಪದ ಶನಿವಾರಸಂತೆ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಡೆಂಗಿ ಜ್ವರ ಹಾಗೂ ಜೀವ ವಿಮೆಯ ಮೈಕ್ರೊ ಬಜೆಟ್ ಕುರಿತು ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಡೆಂಗಿ ಜ್ವರದ ಕುರಿತು ಆಶಾ ಕಾರ್ಯಕರ್ತೆ ಸಂಧ್ಯಾ ಮಾಹಿತಿ ನೀಡಿ, ಡೆಂಗಿ ಜ್ವರ ಸೊಳ್ಳೆಯಿಂದ ಬರುವ ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಮನೆಯ ಸುತ್ತಮುತ್ತ ಕಲುಷಿತ ನೀರು ನಿಂತುಕೊಳ್ಳದಂತೆ ನೋಡಿಕೊಳ್ಳಬೇಕು. ರಬ್ಬರ್ ಟೈರ್, ತೆಂಗಿನಮಟ್ಟ ಮುಂತಾದ ವಸ್ತುಗಳು ನೀರಿನಲ್ಲಿ ಸೇರಿಕೊಂಡಲ್ಲಿ ಸೊಳ್ಳೆಗಳು ಉತ್ಪತ್ತಿಯಾಗುತ್ತದೆ. ಈ ಸೊಳ್ಳೆ ಮನುಷ್ಯನಿಗೆ ಕಚ್ಚಿದಾಗ ಡೆಂಗಿ ಜ್ವರ ಬರುತ್ತದೆ ಎಂದರು.
ಎಡೆಬಿಡದೆ ಜ್ವರ ಬರುವದು, ಶರೀರದ ಅಂಗಾಂಗಗಳಲ್ಲಿ ನೋವು ಕಾಣಿಸಿಕೊಳ್ಳುವದು ಡೆಂಗಿ ಜ್ವರದ ಲಕ್ಷಣಗಳಾಗಿದ್ದು, ಈ ನಿಟ್ಟಿನಲ್ಲಿ ಶರೀರದಲ್ಲಿ ವ್ಯತಾಸ ಕಾಣಿಸಿಕೊಂಡ ತಕ್ಷಣ ಹತ್ತಿರದ ಆಸ್ಪತ್ರೆಗೆ ಹೋಗಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ರಕ್ತ ಪರೀಕ್ಷೆ ಮಾಡಿಸಿಕೊಂಡು ಜ್ವರ ನಿಯಂತ್ರಣಕ್ಕೆ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು.
ಮನೆಯ ಸುತ್ತಮುತ್ತಲಿನ ಜಾಗವನ್ನು ಸ್ವಚ್ಛತೆಯಿಂದ ಕಾಪಾಡಿಕೊಳ್ಳುವದು, ಚರಂಡಿ ನೀರು ನಿಂತುಕೊಳ್ಳದಂತೆ ಜಾಗ್ರತೆ ವಹಿಸುವದು ಹಾಗೂ ಕಾಯಿಲೆ ಬಗ್ಗೆ ಅರಿವು ಹೊಂದುವದು ಮುಂತಾದ ಮಾಹಿತಿಗಳಿಂದ ಜ್ವರವನ್ನು ನಿಯಂತ್ರಣಗೊಳಿಸಲು ಸಾಧ್ಯ ಇದೆ ಎಂದು ಹೇಳಿದರು.
ಒಕ್ಕೂಟದ ಅಧ್ಯಕ್ಷೆ ಶಾಹಿದ್ ತಾಜ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೀವ ವಿಮೆಯ ಮೈಕ್ರೊ ಬಜೆಟ್ ವಿಮೆ ಪಾಲಿಸಿ ಕುರಿತು ಮಾಹಿತಿ ನೀಡಲಾಯಿತು. ಈ ಸಂದರ್ಭ ಜೀವ ವಿಮೆ ಪಾಲಿಸಿಯ ಬಾಂಡ್ಗಳನ್ನು ಸಂಘದ ಸದಸ್ಯರಾದ ರತ್ನ ಮತ್ತು ಶೋಭಾವತಿ ಅವರುಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕ ರಮೇಶ್ ಮಾತನಾಡಿದರು. ಸಂಸ್ಥೆ ಕಾರ್ಯಕರ್ತರಾದ ಬಾಲಕೃಷ್ಣ, ದಿವ್ಯ, ಲಕ್ಷ್ಮಿ, ಎಸ್.ಆರ್. ಶೋಭಾವತಿ ಮುಂತಾದವರು ಹಾಜರಿದ್ದರು.