ಕರಿಕೆ, ಆ.15: ಕೊಡಗಿನಲ್ಲಿ ಕಳೆದ ಹತ್ತಾರು ದಿನಗಳಿಂದ ಸುರಿದ ವಿಪರೀತ ಗಾಳಿಮಳೆಯಿಂದಾಗಿ ಜಿಲ್ಲೆಯ ಗಡಿಗ್ರಾಮ ಕರಿಕೆಯಲ್ಲಿ ಮಳೆರಾಯ ಅನೇಕ ಅವಾಂತರ ಸೃಷ್ಟಿಸಿದ್ದಾನೆ. ಇಲ್ಲಿನ ಚೆತ್ತುಕಾಯ ಕುಂಡತ್ತಿಕಾನ ನಿವಾಸಿ ರಾಮ ಎಂಬವರ ಮನೆಯ ಮೇಲ್ಚಾವಣಿಯ ಒಂದು ಭಾಗದ ಒಂಬತ್ತು ಸಿಮೆಂಟ್ ಶೀಟುಗಳು ಹಾರಿಹೋಗಿದ್ದು ಅಂದಾಜು ಇಪ್ಪತ್ತು ಸಾವಿರ ರೂ. ನಷ್ಟ ಸಂಭವಿಸಿದೆ. ಅಲ್ಲದೇ ಎಳ್ಳುಕೊಚ್ಚಿ ಹೊಸಮನೆ ಕಮಲಾಕ್ಷ ಎಂಬವರ ಕೊಟ್ಟಿಗೆಯ ಶೀಟು ಕೂಡ ಜಖಂಗೊಂಡಿದ್ದು, ಐದು ಸಾವಿರದಷ್ಟು ನಷ್ಟ ಸಂಭವಿಸಿರುವದಾಗಿ ವರದಿಯಾಗಿದೆ.
ಸ್ಥಳಕ್ಕೆ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಪ್ರಭಾಕರ್ ಹಾಗೂ ಗ್ರಾಮ ಸಹಾಯಕ ಜನಾರ್ದನ ಭೇಟಿ ನೀಡಿ ಪರಿಶೀಲನೆ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಗ್ರಾಮದಲ್ಲಿ ಒಟ್ಟಾರೆ ಹನ್ನೊಂದು ಮನೆ ಹಾನಿ ಪ್ರಕರಣಗಳು ಸಂಭವಿಸಿದ್ದು ನೂರಾರು ಕೃಷಿಕರ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ, ಗೇರು, ರಬ್ಬರ್, ತೆಂಗು, ಬಾಳೆ, ಕಾಳುಮೆಣಸು ಕೃಷಿ ವಿಪರೀತ ಗಾಳಿ ಮಳೆಯಿಂದಾಗಿ ನೆಲಕಚ್ಚಿವೆ. ಜಿಲ್ಲಾಡಳಿತ ಮಳೆ ಹಾನಿ ಪರಿಹಾರದಡಿಯಲ್ಲಿ ಸೂಕ್ತ ಬೆಳೆ ಪರಿಹಾರ ನೀಡಲು ತ್ವರಿತವಾಗಿ ಕ್ರಮ ಕೈಗೊಳ್ಳಬೇಕೆಂದು ಕೃಷಿಕರು ಆಗ್ರಹಿಸಿದ್ದಾರೆ.
-ಸುಧೀರ್