ಸಿದ್ದಾಪುರ, ಆ. 15 : ಮಹಾ ಮಳೆಗೆ ಕಾವೇರಿ ನದಿಯು ಅಪಾಯದ ಮಟ್ಟದಲ್ಲಿ ಹರಿದು ನದಿ ತೀರದ ನಿವಾಸಿಗಳ ಜೀವನವನ್ನೆ ಅಲ್ಲೋಲ ಕಲ್ಲೋಲ ಮಾಡಿದೆ. ಕಾವೇರಿ ನದಿಯ ನೀರಿನ ಹೊಡೆತಕ್ಕೆ ನದಿ ದಡವು ಕುಸಿಯುತ್ತಿದೆ. ಮತ್ತಷ್ಟು ಮನೆಗಳು ಕುಸಿಯುತ್ತಿವೆ.

ಹಲವಾರು ಮನೆಗಳ ಗೋಡೆಗಳು ಬೃಹತ್ ಗಾತ್ರದಲ್ಲಿ ಬಿರುಕು ವಾಸಕ್ಕೆ ಯೋಗ್ಯವಿಲ್ಲದಂತಾಗಿದೆ. ನದಿಯಲ್ಲಿ ಪ್ರವಾಹ ಸಂಪೂರ್ಣ ಇಳಿಕೆಯಾಗಿದ್ದರೂ ನಿವಾಸಿಗಳ ಎದೆಯಲ್ಲಿ ಆತಂಕ ದೂರವಾಗಿಲ್ಲ. ಕರಡಿಗೋಡಿನ ನದಿ ಪಾತ್ರದಲ್ಲಿ 40 ಕ್ಕೂ ಅಧಿಕ ಮನೆಗಳು ನೆಲಸಮಗೊಂಡಿದ್ದು ನೂರಾರು ಮನೆಗಳು ಬಿರುಕು ಬಿಟ್ಟು ಕುಸಿದು ಬೀಳುವ ಸ್ಥಿತಿಯಲ್ಲಿದೆ. ನದಿ ಪಾತ್ರದ ನಿವಾಸಿ 70 ವರ್ಷ ಪ್ರಾಯದ ವೃದ್ಧ ಬಿಡುತ್ತಿದ್ದು; ಕೃಷ್ಣ ಎಂಬವರ ಮನೆ ಕುಸಿದಿದೆ.

ಕುಸಿದಿರುವ ಮನೆಯ ಅಡಿಯಲ್ಲಿ ಸಿಲುಕಿರುವ ದಾಖಲಾತಿಗಳನ್ನು ಹುಡುಕಾಡುತ್ತಾ ದುಃಖಿಸುತ್ತಿದ್ದಾರೆ. ಗ್ರಾ.ಪಂ ಮಾಜಿ ಅಧ್ಯಕ್ಷೆ ಯಮುನಾ ಎಂಬವರ ಮನೆಯ ಗೋಡೆಗಳು ಬೃಹತ್ ಗಾತ್ರದಲ್ಲಿ ಬಿರುಕು ಬಿಟ್ಟಿದೆ. ಮನೆ ನೆಲಸಮಗೊಂಡು ಬೀದಿ ಪಾಲಾಗಿರುವ ನಾರಾಯಣ ಮತ್ತು ರಾಮಚಂದ್ರ ತಮಗೆ ಸರಕಾರವು ಶಾಶ್ವತ ಸೂರು ಅಥವಾ ಬದಲಿ ವ್ಯವಸ್ಥೆ ಕಲ್ಪಿಸ ಬೇಕೆಂದು ಒತ್ತಾಯಿಸಿದರು. ವೈಜು ಎಂಬವರು ತಮಗೆ ಸರಕಾರ ನೀಡುವ ಚಿಕ್ಕಾಸು ಪರಿಹಾರ ಬೇಡ ಪುನರ್ವಸತಿ ಕಲ್ಪಿಸಿಕೊಡಬೇಕೆಂದರು.

ಗುಹ್ಯ ಕಕ್ಕಟ್ಟುಕಾಡು ವ್ಯಾಪ್ತಿಯಲ್ಲಿ ಹಾಗೂ ನೆಲ್ಯಹುದಿಕೇರಿ, ಕುಂಬಾರಗುಂಡಿಯಲ್ಲು ನೂರಾರು ಮನೆಗಳು ನೆಲಸಮ ಗೊಂಡಿವೆ. ಜಲಾವೃತಗೊಂಡಿರುವ ಮನೆಗಳ ನಿವಾಸಿಗಳು ಈಗ ತಮ್ಮ ಮನೆಗಳಲ್ಲಿ ಸ್ವಚ್ಛತಾ ಕಾರ್ಯ ಮಾಡುತ್ತಿದ್ದಾರೆ. ನದಿ ತೀರದ ಮಂದಿ ಪರಿಹಾರ ಕೇಂದ್ರಗಳಿಂದ ತಮ್ಮ ಮನೆಗೆ ಬಂದು ತಮ್ಮ ಮನೆಯಲ್ಲಿ ಅಳಿದುಳಿದ ವಸ್ತುಗಳನ್ನು ಹುಡುಕಿ ಬಟ್ಟೆಗಳನ್ನು ಸ್ವಚ್ಛ ಗೊಳಿಸಿದರು.ಕರಡಿಗೋಡಿನ ನದಿ ತೀರದಲ್ಲಿ ಸುಮಾರು 30 ವರ್ಷಗಳಿಂದ ಹೊಟೇಲ್ ಹಾಗೂ ಅಂಗಡಿ ನಡೆಸುತ್ತಿದ್ದ ಮಹಮ್ಮದ್ ಅಲಿ ಅವರ ಹೊಟೇಲ್ ಹಾಗೂ ಅಂಗಡಿ ಜಲಾವೃತಗೊಂಡಿದೆ. - ವಾಸು