ಕುಶಾಲನಗರ, ಆ. 15: ಕಾವೇರಿ ನದಿ ಉಕ್ಕಿ ಹರಿದ ಪರಿಣಾಮ ಜಿಲ್ಲೆಯ ಗಡಿಭಾಗದಲ್ಲಿ ಸಾಕಾನೆಯೊಂದು ನೀರಿನಲ್ಲಿ ಸಿಲುಕಿದ್ದ ಸಂದರ್ಭ ಅರಣ್ಯ ಇಲಾಖೆ ಮತ್ತು ಸ್ಥಳೀಯ ಯುವಕರು ಹರಸಾಹಸ ಪಟ್ಟು ನೀರಿನಿಂದ ಆನೆಯನ್ನು ಹೊರ ಸಾಗಿಸುವಲ್ಲಿ ಯಶಸ್ವಿಯಾದ ಘಟನೆ ನಡೆದಿದೆ.

ಆಗಸ್ಟ್ 9 ರಂದು ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಗ್ರಾಮದ ದೊಡ್ಡಹರವೆ ಸಾಕಾನೆ ಶಿಬಿರದ ಆನೆಯೊಂದನ್ನು ಎಂದಿನಂತೆ ಕಾಡಿನಲ್ಲಿ ಸರಪಳಿಯಲ್ಲಿ ಕಟ್ಟಿ ಹಾಕಿ ಮೇಯಲು ಬಿಡಲಾಗಿತ್ತು. ಏಕಾಏಕಿ ಕಾವೇರಿ ನದಿ ನೀರು ನುಗ್ಗಿದ ಕಾರಣ ಆನೆ ಮರಕ್ಕೆ ಸುತ್ತು ಬಂದ ಹಿನ್ನಲೆಯಲ್ಲಿ ಸರಪಳಿ ಸಿಲುಕಿ ಹೊರಬರಲಾರದೆ ಪರದಾಡುತ್ತಿದ್ದ ದೃಶ್ಯ ಕಂಡ ಅಧಿಕಾರಿಗಳು ಆನೆಯನ್ನು ರಕ್ಷಣೆ ಮಾಡಲು ಹರಸಾಹಸ ಪಡಬೇಕಾಯಿತು.

ರಾತ್ರಿ 8 ಗಂಟೆಯಾದರೂ ಆನೆಯನ್ನು ಸ್ಥಳದಿಂದ ತೆರವುಗೊಳಿಸಲು ಅಸಾಧ್ಯವಾಗಿ ಸೋಮವಾರಪೇಟೆ, ಕೊಪ್ಪ ವ್ಯಾಪ್ತಿಯ ಅಂದಾಜು 10 ಮಂದಿ ಯುವಕರ ತಂಡ ಎರಡು ಗಂಟೆಗಳ ಕಾಲ ನೀರಿನಲ್ಲಿ ಮುಳುಗಿ ಮರದ ಬುಡದಲ್ಲಿ ಕಟ್ಟಲಾಗಿದ್ದ ಆನೆಯ ಸರಪಳಿಯನ್ನು ಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

-ಸಿಂಚು