ಶನಿವಾರಸಂತೆ, ಆ. 14: ಸಮೀಪದ ಕೊಡ್ಲಿಪೇಟೆ ಹೋಬಳಿಯಲ್ಲಿ ಪ್ರಸಕ್ತ ವರ್ಷ ಅತ್ಯಧಿಕ ಮಳೆಯಾಗಿದೆ. ವರ್ಷಾರಂಭದಿಂದ ಈವರೆಗೆ 45 ಇಂಚಿಗೂ ಅಧಿಕ ಮಳೆಯಾಗಿದೆ. ಈ ವಿಭಾಗದಲ್ಲಿ ಹರಿಯುವ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ನಾಟಿ ಮಾಡಿರುವ ಗದ್ದೆಗಳು ಜಲಾವೃತಗೊಂಡಿದ್ದವು. ಎರಡು ದಿನಗಳಿಂದ ಮಳೆ ಕ್ಷೀಣಿಸಿದ್ದು, ಬಿಡುವು ನೀಡಿದ್ದರಿಂದ ಹೊಳೆ ಇಳಿದಿದ್ದು, ಯಾವದೇ ರೀತಿಯ ಬೆಳೆ ಹಾನಿಯಾಗಿಲ್ಲ ಎನ್ನುತ್ತಾರೆ ಅಲ್ಲಿನ ರೈತರು.
ಶನಿವಾರಸಂತೆ ಹೋಬಳಿಯಲ್ಲೂ ಮಳೆ ಪ್ರಮಾಣ ಕಡಿಮೆಯಾಗಿದೆ. ಬಿಡುವು ನೀಡುತ್ತಾ ತುಂತುರಾಗಿ ಸುರಿಯುತ್ತಿದೆ. ಕಾಜೂರು ಹೊಳೆ, ಬಿಳಾಹ ಹೊಳೆ ತುಂಬಿ ಹರಿದರೂ ನಾಟಿ ಕೆಲಸ ಸಂಪೂರ್ಣಗೊಂಡಿದೆ. ಬೆಳೆ ಹಾನಿ ಸಂಭವಿಸಲಿಲ್ಲ. ಈ ವರೆಗೆ 37 ಇಂಚು ಮಳೆಯಾಗಿದೆ.
ಮಳೆ ಸ್ವಲ್ಪ ದಿನ ಬಿಡುವು ನೀಡಿದ್ದರೆ ಒಳ್ಳೆಯದಿತ್ತು. ತುಂತುರಾಗಿ ಸೋನೆಯಾಗಿ ಸುರಿಯುತ್ತಿರುವದರಿಂದ ಕಾಫಿ ಗಿಡದ ಎಲೆಗಳ ಮೇಲೆ ನೀರು ತಿಂತು ಕೊಳೆ ರೋಗ ತಗಲಬಹುದು. ಇಳುವರಿ ಕಡಿಮೆಯಾಗಿರುತ್ತದೆ ಎನ್ನುತ್ತಾರೆ ಅಪ್ಪಶೆಟ್ಟಳ್ಳಿ ಗ್ರಾಮದ ಕೃಷಿಕ ಎ.ಡಿ. ಮೋಹನ್ ಕುಮಾರ್. -ನರೇಶ್ಚಂದ್ರ