ಕೂಡಿಗೆ, ಆ. 14: ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯದ ಎದುರು ಹರಿಯುವ ಕಾವೇರಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತೂಗು ಸೇತುವೆಯು ಕಳೆದ ನಾಲ್ಕು ದಿನಗಳ ಹಿಂದೆ ಅಪಾಯ ಮಟ್ಟದಲ್ಲಿ ಹರಿದ ಕಾವೇರಿ ನದಿ ನೀರಿನ ರಭಸಕ್ಕೆ ಸಿಲುಕಿ ಸಂಪೂರ್ಣ ಹಾನಿಯಾಗಿದೆ. ನೀರಿನ ಒತ್ತಡಕ್ಕೆ ದೊಡ್ಡ ಕಬ್ಬಿಣದ ಸಲಾಖೆÉಗಳು ತುಂಡಾಗಿದ್ದು, ಅದಕ್ಕೆ ಅಳವಡಿಸಿದ್ದ ಮೆಟ್ಟಿಲುಗಳು ಕೊಚ್ಚಿ ಹೋಗಿವೆ. ಕೆಲವು ಮೆಟ್ಟಿಲುಗಳು ಮತ್ತು ರ್ಯಾಕ್ ಮಾತ್ರ ಉಳಿದಿವೆ.

ತೂಗು ಸೇತುವೆಯು ಸಂಚರಿಸಲು ಯೋಗ್ಯವಾಗಿಲ್ಲದಿದ್ದರೂ ಕಾವೇರಿ ನದಿಯಲ್ಲಿ ನೀರು ಹರಿಯುತ್ತಿದ್ದು, ಸೇತುವೆಯ ಮೇಲೆ ನಡೆದು ಆಯತಪ್ಪ್ಪಿ ಬಿದ್ದರೆ ಸೀದ ನದಿ ನೀರಿನಲ್ಲಿ ಕೊಚ್ಚಿಹೋಗುವ ವಿಚಾರ ತಿಳಿದಿದ್ದರೂ ಸಂಪರ್ಕ ಸೇತುವೆಯಾಗಿರುವ ತೂಗುಸೇತುವೆಯ ಮೇಲೆ ಸಾರ್ವಜನಿಕರು ತಿರುಗಾಡುತ್ತಿರುವದು ಕಂಡುಬರುತ್ತಿದೆ.

ಸೇತುವೆಯು ಸಂಪೂರ್ಣ ಹಾನಿಯಾಗಿದ್ದು, ಯಾವದೇ ಅಪಾಯಗಳು ಸಂಭವಿಸದಂತೆ ಗ್ರಾ.ಪಂ.ನಿಂದ ನಾಮಫಲಕ ಅಳವಡಿಸಿ, ಪೊಲೀಸ್ ಬ್ಯಾರಿಕೇಡ್ ಅಳವಡಿಸಿ ನಿರ್ಬಂಧ ಹೇರಿದ್ದರೂ ಪಿರಿಯಾಪಟ್ಟಣ ತಾಲೂಕಿನ ಗಡಿ ಭಾಗದ ಗ್ರಾಮದವರು ಕಣಿವೆಯ ಕಡೆಯಿಂದ ಹೋಗಲು ಮತ್ತು ಬರಲು ಕೆಲ ಯುವಕರು ಸಾಹಸದಲ್ಲಿ ಬ್ಯಾರಿಕೇಡ್ ಹತ್ತಿ ಮುರಿದು ಹೋಗಿರುವ ಸೇತುವೆಯ ಎರಡೂ ಕಡೆಯ ಕಬ್ಬಿಣದ ರ್ಯಾಕ್ ಹಿಡಿದು, ತಳಭಾಗದಲ್ಲಿ ಮೆಟ್ಟಿಲುಗಳು ಇಲ್ಲದಿದ್ದರೂ, ಕಬ್ಬಿಣದ ಸಲಾಖೆಯ ಮೇಲೆ ನಡೆದುಕೊಂಡು ಹೋಗುತ್ತಿರುವÀದು ಕಂಡುಬರುತ್ತಿದೆ. ಕೆಲ ಯುವಕರು ಮುರಿದು ಹೋಗಿರುವ ಸೇತುವೆಯ ಮೇಲೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಸಲುವಾಗಿ ತಮ್ಮ ಜೀವದ ಹಂಗನ್ನು ತೊರೆದು ಸೇತುವೆಯ ಮೇಲೆ ಓಡಾಡುತ್ತಿದ್ದಾರೆ. ಸ್ವಲ್ಪ ಕೈತಪ್ಪಿದರೆ ನೀರಿಗೆ ಬೀಳುವದು ಕಟ್ಟಿಟ್ಟ ಬುತ್ತಿಯಂತೆ ತೀರಾ ಅಪಾಯದಲ್ಲಿದೆ. -ಕೆ.ಕೆ. ನಾಗರಾಜಶೆಟ್ಟಿ