*ಗೋಣಿಕೊಪ್ಪಲು, ಆ. 14: ಕೀರೆಹೊಳೆ ಪ್ರವಾಹ ನಲ್ಲೂರಿನ ಭತ್ತದ ಗದ್ದೆಗಳನ್ನು ಕೊಚ್ಚಿಹಾಕಿದೆ. ನಲ್ಲೂರಿನ ಚಟ್ರಮಾಡ ಸುಜಯ್ ಬೋಪಯ್ಯ ಅವರ ಭತ್ತದ ಗದ್ದೆಯ ಮಣ್ಣನ್ನು ಕೀರೆಹೊಳೆ ನೀರು ನುಂಗಿ ಹಾಕಿದೆ.
ನದಿ ದಡದಲ್ಲಿ 6 ತಿಂಗಳ ಹಿಂದೆ ಕಟ್ಟಿದ್ದ ಕಾಂಕ್ರಿಟ್ ತಡೆಗೋಡೆಯು ಕುಸಿದು ಹೋಗಿದೆ. ಗದ್ದೆಯಲ್ಲಿ ಬೃಹತ್ ಹೊಂಡ ಬಿದ್ದು ಫಲವತ್ತಾದ ಮಣ್ಣು ಹೊಳೆಪಾಲಾಗಿದೆ.
ಗದ್ದೆಯ ಕೊರೆತವನ್ನು ತಪ್ಪಿಸುವದಕ್ಕಾಗಿ ಬೋಪಯ್ಯ ಎರಡು ವರ್ಷಗಳ ಹಿಂದೆ ಜಿಲ್ಲಾ ಪಂಚಾಯಿತಿ ಅನುದಾನ ರೂ 18 ಲಕ್ಷ ವೆಚ್ಚದಲ್ಲಿ ಕಾಂಕ್ರಿಟ್ ತಡೆಗೋಡೆ ನಿರ್ಮಿಸಿದ್ದರು. ಇದು ಕೇವಲ ಒಂದೇ ವರ್ಷದಲ್ಲಿ ಕೊಚ್ಚಿಹೋಗಿತ್ತು. ಮತ್ತೆ ರೂ 10 ಲಕ್ಷ ಅನುದಾನದಲ್ಲಿ 6 ತಿಂಗಳ ಹಿಂದೆ ಅದೇ ಸ್ಥಳದಲ್ಲಿ ಹೊಸದಾಗಿ ತಡೆಗೋಡೆ ನಿರ್ಮಿಸಲಾಗಿತ್ತು. ಇದೀಗ ಅದೂ ಕೂಡ ಕುಸಿದು ಹೋಗಿದೆ. ಹಳ್ಳದ ಗದ್ದೆಗಳು ಕೊಚ್ಚಿ ಹೋಗಿದ್ದರೆ, ಮೇಡು ಗದ್ದೆಯ ಮೇಲೆ ಮರಳು ತುಂಬಿದೆ. ಭತ್ತದ ಸಸಿ ಮಡಿ ಮೇಲೂ ಮಣ್ಣು ತುಂಬಿದೆ.ಇದರಿಂದ ಕೃಷಿಗೆ ದಾರಿ ಕಾಣದೆ ಬೋಪಯ್ಯ ಚಿಂತಿತರಾಗಿದ್ದಾರೆ.
ಅಮ್ಮತ್ತಿ ಭಾಗದಲ್ಲಿ ಕಿರಿದಾಗಿ ಹರಿಯುವ ಕೀರೆಹೊಳೆ ನಲ್ಲೂರು ಭಾಗದಲ್ಲಿ ವಿಶಾಲವಾಗಿ ಹರಿಯುತ್ತದೆ. ಈ ನದಿಯ ನೀರನ್ನು ಕೃಷಿಗೆ ಬಳಸಿಕೊಳ್ಳುವದಕ್ಕೆ ಕಿರುಗೂರು ಬಳಿ 70 ವರ್ಷದ ಹಿಂದೆ ಪಿಕಪ್ ನಿರ್ಮಿಸಲಾಗಿದೆ. ಇದರ ರಾಜ ಕಾಲುವೆ ಮೂಲಕ ನೀರನ್ನು ಕೃಷಿಗೆ ಬಳಸಿಕೊಳ್ಳಲಾಗುತ್ತಿದೆ. ಈ ಬಾರಿ ನದಿ ಮತ್ತು ಕಾಲುವೆ ನೀರು ಉಕ್ಕಿ ನದಿ ಬಯಲಿನ ಗದ್ದೆಗಳಿಗೆ ಅಪಾರ ನಷ್ಟ ಮಾಡಿದೆ. -ಎನ್.ಎನ್. ದಿನೇಶ್