ಕೂಡಿಗೆ, ಆ. 14: ಜಿಲ್ಲೆಯಲ್ಲಿ ಅನೇಕ ರೈತರು ಶುಂಠಿ ಬೆಳೆ ಬೆಳೆದಿದ್ದಾರೆ. ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಪ್ರವಾಹವು ಜಲಾನಯನ ಪ್ರದೇಶದಲ್ಲಿ ರೈತರು ಕೃಷಿ ಮಾಡಿದ ಭೂಮಿಯನ್ನು ಆವರಿಸಿಕೊಂಡು ಸಂಪೂರ್ಣ ಜಲಾವೃತವಾದ ಪರಿಣಾಮ ಶುಂಠಿ ಬೆಳೆಗೆ ಈಗಾಗಲೇ ರೋಗಗಳು ಕಾಣಿಸಿಕೊಂಡಿವೆ.
ಎರಡು ಮೂರು ದಿನಗಳು ಜಲಾವೃತಗೊಂಡಿದ್ದ ಶುಂಠಿ ಬೆಳೆಯು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿದೆ. ಬಿತ್ತನೆ ಶುಂಠಿಗೆ 4 ರಿಂದ 5000 ರೂ ನೀಡಿ ಖರೀದಿಸಿ, ಶುಂಠಿ ಬಿತ್ತನೆ ಮಾಡಿ ಮೂರು ತಿಂಗಳುಗಳಷ್ಟೇ ಕಳೆದಿದ್ದು, ಇದೀಗ ನೀರಿನಿಂದ ಕೊಳೆತು ಹೋಗಿದ್ದು, ರೈತರು ಸಂಕಷ್ಟದಲ್ಲಿದ್ದಾರೆ.
ಶುಂಠಿಯ 60 ಕೆ.ಜಿ.ಚೀಲವೊಂದಕ್ಕೆ 4000 ರೂ ಇದ್ದ ಬೆಲೆ ಇದೀಗ 3000 ಕ್ಕೆ ಇಳಿದಿದೆ. ನೀರಿನಿಂದ ಹಾನಿಯಾದ ಶುಂಠಿಯಲ್ಲಿ ಅಲ್ಪಸ್ವಲ್ಪ ಇದ್ದ ಶುಂಠಿಗೂ ಮಹಾಕಾಳಿ ಕೊಳೆರೋಗ ಕಾಣಿಸಿಕೊಂಡಿದ್ದು, ಹಾಕಿದ ಬಂಡವಾಳವೆಲ್ಲ ನೀರಿನಲ್ಲಿ ತೇಲಿಹೋದ ಸ್ಥಿತಿಯಲ್ಲಿದ್ದು, ರೈತರು ಮುಂದೇನು ಎಂಬ ಯೋಚನೆಯಲ್ಲಿದ್ದಾರೆ.