ಸೋಮವಾರಪೇಟೆ, ಆ.12: ಭಾರೀ ಮಳೆಗೆ ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಡಿಗಾಣ ಗ್ರಾಮದ ಜನರ ಬದುಕು ಅತಂತ್ರವಾಗಿದೆ.
ಕುಡಿಗಾಣ ಗ್ರಾಮ ಮತ್ತು ಪಟ್ಟಣವನ್ನು ಬೇರ್ಪಡಿಸಿರುವ ಹೊಳೆಗೆ ನಿರ್ಮಿಸಲಾಗಿರುವ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು, ಒಂದು ಭಾಗದಿಂದ ಗ್ರಾಮ ಸಂಪರ್ಕಿಸುವ ದಾರಿ ಮುಚ್ಚಲ್ಪಟ್ಟಿದೆ.
ಕೊತ್ನಳ್ಳಿ ಭಾಗದಿಂದ ಕುಡಿಗಾಣ ಸಂಪರ್ಕಿಸುವ ರಸ್ತೆಯಲ್ಲಿರು ಸೇತುವೆಯ ತಳಭಾಗದವರೆಗೆ ಸದ್ಯ ಹೊಳೆ ನೀರು ಹರಿಯುತ್ತಿದ್ದು, ಮಳೆ ಹೀಗೆಯೇ ಮುಂದುವರೆದರೆ ಒಂದೆರಡು ದಿನಗಳಲ್ಲಿ ಕುಡಿಗಾಣ ಗ್ರಾಮ ಹೊರ ಜಗತ್ತಿನ ಸಂಪರ್ಕ ಕಡಿದುಕೊಳ್ಳಲಿದೆ.
ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕಳೆದ 5 ವರ್ಷಗಳ ಹಿಂದೆ ಕುಡಿಗಾಣ ಗ್ರಾಮಕ್ಕೆ ಸೇತುವೆ ಕಲ್ಪಿಸಲಾಗಿದ್ದು, ಪ್ರತಿ ಮಳೆಗಾಲದಲ್ಲೂ ಈ ಸೇತುವೆಯ ಮೇಲೆ ಹೊಳೆ ನೀರು ಹರಿಯುತ್ತದೆ. ಪರಿಣಾಮ ನೀರಿನ ಮಟ್ಟ ಇಳಿಕೆಯಾಗುವವರೆಗೂ ಇಲ್ಲಿನ ಮಂದಿ ಹೊರ ಭಾಗದ ಸಂಪರ್ಕ ಕಳೆದುಕೊಳ್ಳುತ್ತಾರೆ.
ಪ್ರಸಕ್ತ ವರ್ಷ ಬೆಂಕಳ್ಳಿ ಮೂಲಕ ಕುಡಿಗಾಣ ಸಂಪರ್ಕಿಸುವ ರಸ್ತೆಯಲ್ಲಿನ ಸೇತುವೆಯ ಮೇಲೆ ನೀರು ಹರಿಯುತ್ತಿದೆ. ಇದರೊಂದಿಗೆ ರಸ್ತೆಯ ಒಂದು ಭಾಗ ಕೊಚ್ಚಿಕೊಂಡು ಹೋಗಿರುವದರಿಂದ ನೀರಿನ ಮಟ್ಟ ಇಳಿಕೆಯಾದರೂ ಸಂಪರ್ಕ ಕಷ್ಟಸಾಧ್ಯ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಚಿಕ್ಕಂಡಿ ಹೊಳೆಯ ಸೇತುವೆ ಈಗಾಗಲೇ ಮುಳುಗಡೆಯಾಗಿದೆ. ಇನ್ನು ಕೊತ್ನಳ್ಳಿ ಮೂಲಕ ಸಂಪರ್ಕ ಸಾಧಿಸುವ ಸೇತುವೆಯ ಮೇಲೆ ನೀರು ಹರಿಯಲು ಎರಡು ಅಡಿಗಳಷ್ಟು ಬಾಕಿ ಇದೆ. ಗ್ರಾಮದ 15 ರಿಂದ 20 ಮಂದಿಯ ತಂಡ ಸ್ವಯಂ ಸೇವಕರಂತೆ ಗ್ರಾಮದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಹೊಳೆ ಬದಿ ಬಿಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಸೇತುವೆಗೆ ಅಡ್ಡಲಾಗಿ ಸಿಕ್ಕಿಕೊಳ್ಳುವ ಮರಗಳನ್ನು ತೆರವುಗೊಳಿಸಿ ನೀರಿನ ಸರಾಗ ಹರಿಯುವಿಕೆಗೆ ಅನುವು ಮಾಡಿಕೊಡುತ್ತಿದ್ದಾರೆ. ಮರದ ದಿಮ್ಮಿಗಳು ಸೇತುವೆಗೆ ಸಿಲುಕಿಕೊಂಡರೆ ನೀರಿನ ಹರಿವಿಗೆ ತಡೆ ಬೀಳುವ ಹಿನ್ನೆಲೆ, ಸೇತುವೆಯ ಮೇಲೆ ನೀರು ಬಂದು ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇರುವದರಿಂದ ಸ್ವಯಂ ಪ್ರೇರಣೆಯಿಂದ ದಿಮ್ಮಿಗಳನ್ನು ತೆರವುಗೊಳಿಸುತ್ತಿದ್ದಾರೆ.
ಕುಡಿಗಾಣದ ಹೊಳೆಯಲ್ಲಿ ನೀರಿನ ಹರಿವಿನ ಪ್ರಮಾಣ ಅಧಿಕಗೊಂಡ ಹಿನ್ನೆಲೆ 150 ಎಕರೆಗೂ ಅಧಿಕ ಕೃಷಿ ಪ್ರದೇಶಕ್ಕೆ ಹಾನಿಯಾಗಿದೆ ಎಂದು ಗ್ರಾಮದ ಡಿ.ಎಂ. ಸುಧಿನ್‍ಕುಮಾರ್ ತಿಳಿಸಿದ್ದಾರೆ.
ಹೊಳೆಪಾತ್ರದ ಗದ್ದೆಗಳಲ್ಲಿ ಈಗಾಗಲೇ ಹಲವಷ್ಟು ಕೃಷಿಕರು ನಾಟಿ ಮಾಡಿದ್ದು, ಹೊಳೆ ನೀರು ನುಗ್ಗಿದ್ದರಿಂದ ಸಸಿಮಡಿ, ನಾಟಿ ಆಗಿದ್ದ ಪೈರುಗಳು ಕೊಚ್ಚಿಹೋಗಿವೆ. ಸಣ್ಣಪುಟ್ಟ ತೋಡುಗಳು ಉಕ್ಕಿ ಹರಿದು ಗದ್ದೆಯಲ್ಲಿ ಯಥೇಚ್ಛ ನೀರು ಶೇಖರಣೆಯಾಗಿದೆ. ತೋಡುಗಳ ಏರಿ ಒಡೆದು ನೀರು ನುಗ್ಗಿದೆ ಎಂದು ಸುಧಿನ್‍ಕುಮಾರ್ ಅವರು ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದಾರೆ.
ತೋಟಗಳಲ್ಲಿ ಕಾಲಿಡಲೂ ಸಹ ಭಯಪಡುವಂತಾಗಿದೆ. ನೂರಾರು ಮರಗಳು ತೋಟದೊಳಗೆ ಬಿದ್ದಿವೆ. ಭಾರೀ ಗಾಳಿ-ಮಳೆಗೆ ಕಾಫಿ ತೋಟ ದಲ್ಲೂ ಅಧಿಕ ನಷ್ಟ ಸಂಭವಿಸಿದೆ ಎಂದು ಡಿ.ಕೆ. ಈಶ್ವರ ತಿಳಿಸಿದ್ದಾರೆ.
ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕುಡಿಗಾಣ ಗ್ರಾಮದಲ್ಲಿ 60ಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಕೃಷಿಯೇ ಜೀವನಾಧಾರವಾಗಿರುವ ಇಲ್ಲಿನ ಜನರ ಬದುಕಿನ ಮೇಲೆ ಮಳೆ ಮರ್ಮಾಘಾತವನ್ನೇ ನೀಡುತ್ತಿದೆ. ಪ್ರತಿ ವರ್ಷ ಕೃಷಿ ಹಾನಿಗೀಡಾಗುತ್ತಿದ್ದರೂ ಸರ್ಕಾರದಿಂದ ಸಮರ್ಪಕವಾಗಿ ಪರಿಹಾರ ಲಭಿಸುತ್ತಿಲ್ಲ ಎಂದು ಗ್ರಾಮದ ಡಿ.ಪಿ. ಸುರೇಶ್ ಆರೋಪಿಸಿದ್ದಾರೆ.
ಸೀಮೆಎಣ್ಣೆಗೆ ಬೇಡಿಕೆ: ಕಳೆದ 10 ದಿನಗಳಿಂದ ಈ ಭಾಗದಲ್ಲಿ ವಿದ್ಯುತ್ ಸ್ಥಗಿತಗೊಂಡಿದ್ದು, ನಿನ್ನೆಯಷ್ಟೇ ವಿದ್ಯುತ್ ಸಂಪರ್ಕ ನೀಡಲಾಗಿದೆ. ಮಳೆ-ಗಾಳಿ ಮುಂದುವರೆದರೆ ವಿದ್ಯುತ್ ತಂತಿಗಳ ಮೇಲೆ ಮರ ಉರುಳಿ ಮತ್ತೆ ವಿದ್ಯುತ್ ಸ್ಥಗಿತ ಗೊಳ್ಳಲಿದೆ. ತಾಲೂಕು ಆಡಳಿತದಿಂದ ಆಹಾರ ಇಲಾಖೆ ಮೂಲಕ ಈ ಭಾಗದ ಮಂದಿಗೆ ತಲಾ 5 ಲೀಟರ್ ಸೀಮೇಎಣ್ಣೆ ವಿತರಿಸಲು ಕ್ರಮ ಕೈಗೊಂಡರೆ ದೀಪದ ಬೆಳಕಿನಲ್ಲಾದರೂ ಕತ್ತಲೆ ಕಳೆಯಬಹುದು ಎಂದು ಗ್ರಾಮದ ಮಹೇಶ್ ಅವರು ತಾಲೂಕು ಆಡಳಿತಕ್ಕೆ ಒತ್ತಾಯ ಮುಂದಿಟ್ಟಿದ್ದಾರೆ.
ಸೇತುವೆ ಎತ್ತರಿಸಲು ಒತ್ತಾಯ: ನಮ್ಮಗ್ರಾಮ ನಮ್ಮ ರಸ್ತೆ ಯೋಜನೆಯಡಿ ಕುಡಿಗಾಣ ಗ್ರಾಮ ಸಂಪರ್ಕಕ್ಕೆ ನಿರ್ಮಿಸಲಾಗಿರುವ ಸೇತುವೆ ಮಳೆಗಾಲದಲ್ಲಿ ಮುಳುಗಡೆಯಾಗುತ್ತಿದ್ದು, ಈ ಸೇತುವೆಯನ್ನು ಎತ್ತರಿಸಿ ಹೊಳೆ ನೀರಿನ ಸರಾಗ ಹರಿಯುವಿಕೆಗೆ ಅವಕಾಶ ಕಲ್ಪಿಸಿದರೆ ಗ್ರಾಮಸ್ಥರ ಅರ್ಧ ಸಮಸ್ಯೆ ಬಗೆಹರಿಯಲಿದೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸ ಬೇಕೆಂದು ಸುಧಿನ್‍ಕುಮಾರ್ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಪ್ರಸಕ್ತ ವರ್ಷದ ಭಾರೀ ಮಳೆಗೆ ಕುಡಿಗಾಣ ಗ್ರಾಮದ ಮಹೇಶ್, ಸುಧಿನ್, ರಾಜು, ಸುರೇಶ್ ಡಿ.ಪಿ., ಡಿ.ಕೆ. ಈಶ್ವರ, ಲಕ್ಷ್ಮಣ, ಧರ್ಮ, ಬಸವರಾಜು, ಮುತ್ತಣ್ಣ, ಚಿಣ್ಣಪ್ಪ, ಹೂವಯ್ಯ, ಪ್ರಸನ್ನ, ಕೆ. ರಾಜು, ಎಂ.ಕೆ. ಉತ್ತಯ್ಯ, ಮೇದಪ್ಪ, ಸೋನಪ್ರಕಾಶ್, ಗುರಪ್ಪ, ವೀರರಾಜು, ಪುಟ್ಟರಾಜು, ದಿನೇಶ್, ಕೊಮಾರಪ್ಪ, ಕೃಷ್ಣಪ್ಪ, ಕಾಳಪ್ಪ, ಸೇರಿದಂತೆ ಇತರ 30ಕ್ಕೂ ಅಧಿಕ ಮಂದಿಯ ಕೃಷಿ ಪ್ರದೇಶ ನೀರಿನಿಂದಾವೃತ್ತವಾಗಿದ್ದು, ನಾಟಿ ಮಾಡಿದ್ದ ಗದ್ದೆಗಳು ಹಾನಿಗೀಡಾಗಿವೆ.
ವಾರ್ಷಿಕ 350 ರಿಂದ 400 ಇಂಚು ಮಳೆಯಾಗುವ ಈ ಭಾಗದಲ್ಲಿ ಕೃಷಿಕರು ಪ್ರತಿವರ್ಷ ನಷ್ಟ ಅನುಭವಿಸು ತ್ತಿದ್ದು, ಸರ್ಕಾರದಿಂದ ನ್ಯಾಯೋಚಿತ ಪರಿಹಾರ ಒದಗಿಸಿಕೊಡಲು ಅಧಿಕಾರಿ ವರ್ಗ ಹಾಗೂ ಜನಪ್ರತಿನಿಧಿಗಳು ಮುಂದಾಗಬೇಕಿದೆ. ಇದರೊಂದಿಗೆ ಈ ಭಾಗದ ಮಂದಿಯ ಬೇಡಿಕೆಯಾದ ಸೇತುವೆಯನ್ನು ಎತ್ತರಿಸಲು ಕ್ರಮಕೈಗೊಳ್ಳಬೇಕಿದೆ.
- ವಿಜಯ್ ಹಾನಗಲ್