ಕೂಡಿಗೆ, ಆ. 12 : ಕಳೆದ ವಾರ ಸುರಿದ ಭಾರಿ ಮಳೆಯಿಂದ ಹಾರಂಗಿ-ಕಾವೇರಿ ನದಿಯ ಸಮೀಪವಿದ್ದ 250ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದವು. ಈಗ ನೀರು ಇಳಿಮುಖ ಗೊಂಡಿರುವದರಿಂದ ರಸ್ತೆ, ಚರಂಡಿ ಹಾಗೂ ಜಲಾವೃತಗೊಂಡಿದ್ದ ಮನೆಗಳ ಸ್ವಚ್ಛತೆ ಕಾರ್ಯ ಮುಂದುವರೆದಿದೆ.
ಮುಳ್ಳುಸೋಗೆ, ಕೂಡುಮಂಗ ಳೂರು ಮತ್ತು ಕೂಡಿಗೆ ವ್ಯಾಪ್ತಿಯಲ್ಲಿ ಜಲಾವೃತಗೊಂಡಿದ್ದ ಪ್ರದೇಶಗಳನ್ನು ಸ್ವಚ್ಚ ಮಾಡಲಾಗುತ್ತಿದೆ. ರಸ್ತೆಯಲ್ಲಿ ತುಂಬಿದ್ದ ಕಸವನ್ನು ಟ್ರಾಕ್ಟರ್ ಮೂಲಕ ಸಾಗಿಸಿ, ಬ್ಲೀಚಿಂಗ್ ಪೌಡರ್ ಸಿಂಪಡಿಸಲಾಗುತ್ತಿದೆ.
ಜಲಾವೃತ್ತಗೊಂಡಿದ್ದ ತಮ್ಮ ತಮ್ಮ ಮನೆಗಳಲ್ಲಿ ತುಂಬಿದ್ದ ಕಸ, ಮಣ್ಣು ಎಲ್ಲವನ್ನು ಸ್ವಚ್ಛಗೊಳಿಸುವದರಲ್ಲಿ ಮನೆಯ ಸದಸ್ಯರು ನಿರತರಾಗಿದ್ದಾರೆ.
ಮುಳ್ಳುಸೋಗೆ ಗ್ರಾ.ಪಂ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಕೂಡು ಮಂಗಳೂರು ಗ್ರಾ.ಪಂ.ಯ ಅಭಿವೃದ್ಧಿ ಅಧಿಕಾರಿ ಆಯೆಷಾ, ಕೂಡಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಶ್ವಿನಿ ಅವರು ಜಲಾವೃತ ಗೊಂಡ ಮನೆಗಳ ಪಟ್ಟಿಯನ್ನು ಮಾಡಿ, ಸಮೀಕ್ಷೆ ನಡೆಸಿ ಅಂಕಿಅಂಶಗಳನ್ನು ಜಿಲ್ಲಾಧಿಕಾರಿಗಳಿಗೆ ಮತ್ತು ತಾಲೂಕು ಕಾರ್ಯ ನಿರ್ವ ಹಣಾಧಿಕಾರಿಗಳಿಗೆ ಕಳುಹಿಸಲು ಮುಂದಾಗಿದ್ದಾರೆ.
ಈ ಮೂರು ಗ್ರಾಮ ಪಂಚಾಯಿಗಳ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿ, ಮುಂದಿನ ಕ್ರಮಕೈಗೊಳ್ಳಲು ಮುಂದಾಗಿದ್ದಾರೆ.
ಕೊಡಗಿನ ಗಡಿ ಗ್ರಾಮ ಶಿರಂಗಾಲದವರೆಗೆ ಎರಡೂ ನದಿಗಳ ದಡದಲ್ಲಿ ನೀರು ಆವರಿಸಿದ್ದು, ಇದೀಗ ಮಳೆಯ ಪ್ರಮಾಣ ಕಡಿಮೆಯಾಗಿದೆ. ಈ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ದುರ್ವಾಸನೆ ಬಾರದ ರೀತಿಯಲ್ಲಿ ಗ್ರಾಮ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆಯವರು ಮುನ್ನೆಚ್ಚರಿಕೆ ಕ್ರಮವಾಗಿ ವಿವಿಧ ಔಷಧಿಗಳನ್ನು ಸಿಂಪಡಿಸುತ್ತಿದ್ದಾರೆ.
ನದಿ ದಡದಲ್ಲಿ ಅವಶೇಷದಂತೆ ಗಿಡ ಮರಗಳು ಕಾಣುತ್ತಿದ್ದು, ನೀರು ನಿಂತ ಸ್ಥಳಗಳಲ್ಲಿ ಜಲಚರಗಳು ಸತ್ತು ದುರ್ವಾಸನೆ ಬೀರುತ್ತಿದೆ.
ಸಾಂಕ್ರಾಮಿಕ ರೋಗಗಳು ಹರಡುವ ಸಂಭವವಿದ್ದು, ಈ ಭಾಗಗಳಲ್ಲಿ ವಾಸಿಸುವ ಜನರಿಗೆ ಔಷಧಿ ಮತ್ತು ಮಾತ್ರೆಗಳನ್ನು ಆರೋಗ್ಯ ಇಲಾಖೆಯ ವತಿಯಿಂದ ನೀಡಲಾಗುತ್ತಿದೆ.