ವರದಿ: ಚಂದ್ರಮೋಹನ್
ಕುಶಾಲನಗರ, ಆ. 12: ಕಳೆದ ಬಾರಿ ಕುಶಾಲನಗರ ಪಟ್ಟಣದ ಬಡಾವಣೆಗಳು ಮುಳುಗಡೆಯಾಗಲು ಹಾರಂಗಿ ಜಲಾಶಯದಿಂದ ನದಿಗೆ ಬಿಡುಗಡೆಗೊಂಡ ನೀರು ಕಾರಣವಾಗಿದ್ದರೆ ಈ ಬಾರಿ ಮಾತ್ರ ಕುಶಾಲನಗರ ಪಟ್ಟಣದ ಬಡಾವಣೆಗಳು ಮತ್ತು ನೆರೆಯ ಗ್ರಾಮಗಳು ನೀರಿನಿಂದ ಆವೃತಗೊಳ್ಳಲು ಜೀವನದಿ ಕಾವೇರಿಯ ದಿಢೀರ್ ಪ್ರವಾಹ ಕಾರಣವಾಗಿದೆ.
ಕಳೆದ ಆಗಸ್ಟ್ 15 ರಿಂದ 3 ದಿನಗಳ ಕಾಲ ಪಟ್ಟಣದ ಸಾಯಿ, ಕುವೆಂಪು, ಬಸಪ್ಪ, ಇಂದಿರಾ ಮತ್ತಿತರ ಬಡಾವಣೆಗಳು ಸೇರಿದಂತೆ ನೆರೆಯ ಕೊಪ್ಪ, ಕೂಡಿಗೆ ವ್ಯಾಪ್ತಿಯ 500 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದವು. ಈ ಮೂಲಕ ಜನಜೀವನ ಅಸ್ತವ್ಯಸ್ತಗೊಳ್ಳುವದರೊಂದಿಗೆ ಮತ್ತೆ ಕಾವೇರಿ ತನ್ನ ಕೋಪವನ್ನು ಅದೇ ಸಂತ್ರಸ್ತರ ಮೇಲೆ ತೀರಿಸಿಕೊಂಡಿರುವದು ನಿಜಕ್ಕೂ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಈ ಬಾರಿ ಹಾರಂಗಿ ಆಗಸ್ಟ್ 10 ರ ತನಕ ಜಲಾಶಯಕ್ಕೆ ಒಟ್ಟು 10.99 ಟಿಎಂಸಿ ಪ್ರಮಾಣದ ನೀರು ಹರಿದು ಬಂದಿದ್ದು ನದಿಗೆ 4.38 ಟಿಎಂಸಿ ನೀರು ಹರಿಸಲಾಗಿದೆ. ಕಾಲುವೆ ಮೂಲಕ 1.77 ಟಿಎಂಸಿ ನೀರು ಹರಿದಿದೆ. ಜಲಾಶಯದ ಮಟ್ಟ 2853 ಅಡಿಗಳಷ್ಟು ಕಾಯ್ದುಕೊಂಡು 6.92 ಟಿಎಂಸಿ ಪ್ರಮಾಣದ ನೀರನ್ನು ಕಾಯ್ದುಕೊಳ್ಳಲಾಗಿದೆ ಎಂದು ಹಾರಂಗಿ ಯೋಜನಾ ವೃತ್ತದ ಅಧೀಕ್ಷಕ ಅಭಿಯಂತರ ಮಂಜುನಾಥ್ ‘ಶಕ್ತಿ’ಗೆ ತಿಳಿಸಿದ್ದಾರೆ.
ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದಂತೆ ಹಾರಂಗಿ ಜಲಾಶಯದ ಒಳಹರಿವು ಗಮನದಲ್ಲಿಟ್ಟುಕೊಂಡು ಅಷ್ಟೇ ಪ್ರಮಾಣದ ನೀರನ್ನು ನದಿಗೆ ಹರಿಸಲಾಗಿದೆ. ಕಳೆದ ಬಾರಿ ಘಟಿಸಿದ ದುರಂತ ಮರುಕಳಿಸದಂತೆ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ದಿನದ 24 ಗಂಟೆಗಳ ಕಾಲ ಮುನ್ನೆಚ್ಚರಿಕೆ ವಹಿಸಿತ್ತು ಎಂದು ಅವರು ಮಾಹಿತಿ ನೀಡಿದರು.
ಈ ಬಾರಿ ಹಾರಂಗಿ ಜಲಾನಯನ ಪ್ರದೇಶದಲ್ಲಿ ಮಳೆ ಪ್ರಮಾಣ ಕೂಡ ಬಹುತೇಕ ಕುಸಿತ ಕಂಡಿತ್ತು. ಕಳೆದ ಬಾರಿ ಆಗಸ್ಟ್ ತಿಂಗಳ ಅವಧಿಯಲ್ಲಿ 50 ಟಿಎಂಸಿ ಪ್ರಮಾಣದ ನೀರು ನದಿಗೆ ಹರಿದು ಬಂದಿರುವ ದಾಖಲೆ ಕಾಣಬಹುದು.
ಆಗಸ್ಟ್ 7 ರಿಂದ ಕುಶಾಲನಗರ ಪಟ್ಟಣದ ಬಡಾವಣೆಗಳು ಮುಳುಗಡೆಯಾಗಲು ಮಾನವ ನಿರ್ಮಿತ ಅವೈಜ್ಞಾನಿಕ ಅಭಿವೃದ್ಧಿಗಳು ಕಾರಣ ಎನ್ನುವದು ಖಚಿತಗೊಂಡಿದೆ. ಗುಡ್ಡೆಹೊಸೂರು ವ್ಯಾಪ್ತಿಯಿಂದ ಕೂಡಿಗೆ ತನಕ ನದಿಯನ್ನು ಹಾಗೂ ಕೆರೆಗಳನ್ನು ಒತ್ತುವರಿ ಮಾಡುವ ಮೂಲಕ ಸಾವಿರಾರು ಲೋಡ್‍ಗಟ್ಟಲೆ ಕಲ್ಲು ಮಣ್ಣು ತುಂಬಿಸಿ ಕಟ್ಟಡ ನಿರ್ಮಾಣದೊಂದಿಗೆ ನದಿಯ ನೀರನ್ನು ನೇರವಾಗಿ ಹರಿಯಲು ಅಡ್ಡಿಪಡಿಸಿರುವದೇ ಈ ಎಲ್ಲಾ ಆವಾಂತರಕ್ಕೆ ಕಾರಣವಾಗಿದೆ ಎಂದು ಜನವಲಯದಲ್ಲಿ ಕೇಳಿ ಬರುತ್ತಿರುವ ಮಾತು. ನದಿ ತಟಗಳನ್ನು ಪ್ರವಾಸಿ ಕೇಂದ್ರ ಮತ್ತು ವಾಣಿಜ್ಯ ಕೇಂದ್ರಗಳಾಗಿ ಪರಿವರ್ತಿಸುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದ್ದು ಈ ಮೂಲಕ ನದಿ ತನ್ನ ದಾರಿಯನ್ನು ಬದಲಿಸಿಕೊಂಡಿರುವದೇ ಇದಕ್ಕೆ ಸಾಕ್ಷಿಯಾಗಿದೆ. ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಆದೇಶ ಪ್ರಕಾರ ನದಿ ತಟದಿಂದ 500 ಮೀ ತನಕ ಯಾವದೇ ರೀತಿಯ ಕೈಗಾರಿಕೆ, ವಾಣಿಜ್ಯ ಚಟುವಟಿಕೆಗಳು ನಡೆಸಲು ಅನುಮತಿ ಕಲ್ಪಿಸುವಂತಿಲ್ಲ ಎನ್ನುವ ಕಾನೂನಿದ್ದರೂ ಇದನ್ನು ಮೀರಿ ಸ್ಥಳೀಯ ಆಡಳಿತಗಳು ನಿಯಮಬಾಹಿರವಾಗಿ ಅನುಮತಿ ನೀಡುತ್ತಿರುವದು ಈ ಬೆಳವಣಿಗೆಗೆ ಕಾರಣವಾಗುತ್ತಿವೆ.
ಕುಶಾಲನಗರ ಕೊಪ್ಪ ಗಡಿಭಾಗದಲ್ಲಿ ಹೆದ್ದಾರಿ ರಸ್ತೆಯಲ್ಲಿ ನೀರು ಹರಿಯಲು ಇಂತಹ ಅವೈಜ್ಞಾನಿಕ ವ್ಯವಸ್ಥೆಗಳು ಪ್ರಮುಖ ಪಾತ್ರವಹಿಸಿವೆ. 3 ದಿನಗಳ ಕಾಲ ಸೇತುವೆ ಬಳಿಯಿಂದ 200 ಮೀ ದೂರದಷ್ಟು ಉದ್ದಕ್ಕೆ ನದಿ ನೀರು ರಾಷ್ಟ್ರೀಯ ಹೆದ್ದಾರಿ ಮೇಲೆ ಹರಿದು ಇಡೀ ಸಂಚಾರ ವ್ಯವಸ್ಥೆಗೆ ಧಕ್ಕೆಯುಂಟು ಮಾಡಿತ್ತು. ಇನ್ನೊಂದೆಡೆ ಕೊಪ್ಪ ಬಳಿ ಕೊಲ್ಲಿಯಲ್ಲಿ ನದಿ ನೀರು ಸಂಗ್ರಹವಾಗಿ ರಸ್ತೆಗೆ ಹರಿಯಲು ಕಾರಣವಾಗಿತ್ತು. ಈ ಮೂಲಕ ಹೆದ್ದಾರಿ ಸಂಚಾರ ಸ್ಥಗಿತಗೊಂಡು ದೈನಂದಿನ ಜನಜೀವನ ಸಂಪೂರ್ಣ ಸ್ಥಗಿತಗೊಂಡಿತ್ತು. ಕೊಡಗು ಜಿಲ್ಲಾಡಳಿತ ಮಾತ್ರ ಇಡೀ ಜಿಲ್ಲೆಯ ವ್ಯವಸ್ಥೆಯ ಮೇಲೆ ನಿಗಾವಹಿಸುವದರೊಂದಿಗೆ ಹೆದ್ದಾರಿಯಲ್ಲಿ ಯಾವದೇ ರೀತಿಯ ಅನಾಹುತ ಉಂಟಾಗದಂತೆ ಎಚ್ಚರವಹಿಸುವಲ್ಲಿ ಸಂಪೂರ್ಣ ಯಶಸ್ವಿಯಾಗಿರುವದು ಜನವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಕುಶಾಲನಗರ ಡಿವೈಎಸ್ಪಿ ಮುರಳೀಧರ್ ನೇತೃತ್ವದಲ್ಲಿ ತಾಲೂಕಿನ ಪೊಲೀಸ್ ವ್ಯವಸ್ಥೆ ಗಡಿಭಾಗ ಅಲ್ಲದೆ ನೆರೆಯ ಕೊಪ್ಪ ವ್ಯಾಪ್ತಿಯಲ್ಲಿ ಕೂಡ ಭದ್ರತಾ ವ್ಯವಸ್ಥೆ ಕಲ್ಪಿಸಿ ಯಾವದೇ ಅನಾಹುತ ಉಂಟಾಗದಂತೆ ಎಚ್ಚರವಹಿಸಿದ್ದರು. ಆದರೆ ಮೈಸೂರು ಜಿಲ್ಲಾಡಳಿತ ಮಾತ್ರ 3 ದಿನಗಳ ಕಾಲ ಯಾವದೇ ರೀತಿಯ ಪರ್ಯಾಯ ಯೋಜನೆ ರೂಪಿಸದೆ ನಿರ್ಲಕ್ಷ್ಯ ತಾಳಿರುವದು ಗಡಿ ಭಾಗದ ಜನತೆಯಲ್ಲಿ ಅಸಮಾಧಾನ ಮೂಡಿಸಿದೆ. ಬೈಲುಕೊಪ್ಪ ಠಾಣೆಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಸವಿ ಮತ್ತು ಸಿಬ್ಬಂದಿಗಳು ಹಗಲು ರಾತ್ರಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆದರೆ ಅವರಿಗೆ ಬೇಕಾದ ಸೌಕರ್ಯಗಳನ್ನು ಒದಗಿಸುವಲ್ಲಿ ಮೈಸೂರು ಜಿಲ್ಲಾಡಳಿತ ವಿಫಲವಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪದ ಜನತೆ ಹಿಡಿಶಾಪ ಹಾಕುತ್ತಿರುವದು ಕಂಡುಬಂತು. ಒಂದು ಹಂತದಲ್ಲಿ ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್ ಅವರಿಗೂ ಸಂತ್ರಸ್ತ ಪ್ರದೇಶಕ್ಕೆ ಭೇಟಿ ನೀಡಲು ರ್ಯಾಫ್ಟಿಂಗ್ ವ್ಯವಸ್ಥೆ ಕಲ್ಪಿಸುವಲ್ಲಿ ಕೂಡ ಅಲ್ಲಿನ ಆಡಳಿತ ನಿರ್ಲಕ್ಷ್ಯ ತಾಳಿದ್ದು ಗೋಚರಿಸಿತು.
ಮಡಿಕೇರಿ ಕ್ಷೇತ್ರ ಶಾಸಕ ಅಪ್ಪಚ್ಚುರಂಜನ್ ಸೇರಿದಂತೆ ಕೊಡಗು ಕುಶಾಲನಗರದ ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಸ್ವಯಂ ಸೇವಕರು ಯಾವದೇ ಅನಾಹುತ ಸಂಭವಿಸದಂತೆ ಮೂರು ದಿನಗಳ ಕಾಲವೂ ಗಡಿಭಾಗದ ಬಗ್ಗೆ ನಿಗಾವಹಿಸಿದ್ದು ಶ್ಲಾಘನೀಯ ಕಾರ್ಯವಾಗಿತ್ತು.
ತಡರಾತ್ರಿ ಎರಡು ಗಂಟೆ ತನಕ ಕೆಲವು ಸಂಘಸಂಸ್ಥೆಗಳ ಕಾರ್ಯಕರ್ತರು ಜನರಿಗೆ ಸಹಾಯ ಹಸ್ತ ನೀಡುತ್ತಿದ್ದುದು ಕಂಡುಬಂತು. ಕುಶಾಲನಗರದ ಯುವಕನೊಬ್ಬ ಬೆಂಗಳೂರಿನಲ್ಲಿ ಮೃತಪಟ್ಟು ದೇಹ ಸಾಗಿಸುತ್ತಿದ್ದ ಸಂದರ್ಭ ಕೂಡ ಮೈಸೂರು ಜಿಲ್ಲಾಡಳಿತ ಯಾವದೇ ರೀತಿಯ ಸಹಕಾರ ನೀಡಿಲ್ಲ ಎಂದು ಯುವಕನ ಕುಟುಂಬ ಸದಸ್ಯರು ತಮ್ಮ ಅಳಲನ್ನು ‘ಶಕ್ತಿ’ಯೊಂದಿಗೆ ತೋಡಿಕೊಂಡ ಪ್ರಸಂಗವೂ ಕಂಡುಬಂತು.
ಬೆಂಗಳೂರು, ಮೈಸೂರು ಕಡೆಯಿಂದ ಕುಶಾಲನಗರ ಮೂಲಕ ಕೊಡಗು ಜಿಲ್ಲೆಗೆ ಬಂದ ಮಹಿಳೆಯರು, ಮಕ್ಕಳು, ವೃದ್ಧರು ಕುಶಾಲನಗರಕ್ಕೆ ಸಂಪರ್ಕ ದೊರಕದೆ ರಾತ್ರಿಯಿಡೀ ರಸ್ತೆ ಬದಿಯಲ್ಲಿ ಕಾಲ ಕಳೆದ ದೃಶ್ಯವೂ ಗೋಚರಿಸಿತು. ಕುಶಾಲನಗರ ಪೊಲೀಸರ ಮುತುವರ್ಜಿಯಿಂದ ತಡರಾತ್ರಿಯಲ್ಲಿ ಜೆಸಿಬಿ ಟ್ರಾಕ್ಟರ್‍ಗಳ ಮೂಲಕ ಜಲಾವೃತವಾದ ರಸ್ತೆಯಲ್ಲಿ ಸಂತ್ರಸ್ತರನ್ನು ಕುಶಾಲನಗರದತ್ತ ಸಾಗಿಸಿದ್ದು ಸಾರ್ವಜನಿಕರ ಮೆಚ್ಚುಗೆ ಗಳಿಸಿದೆ.
ಕಾವೇರಿ ನದಿಯ ನಿರ್ವಹಣೆ ಕೊರತೆ ಈ ಎಲ್ಲಾ ಆವಾಂತರಕ್ಕೆ ಪ್ರಮುಖ ಕಾರಣವಾಗಿದೆ. ತಕ್ಷಣ ಜಿಲ್ಲಾಡಳಿತ ಭಾಗಮಂಡಲದಿಂದ ಕುಶಾಲನಗರ ತನಕ ನದಿ ಅಗಲೀಕರಣ, ಅಭಿವೃದ್ಧಿ ಯೋಜನೆ ರೂಪಿಸುವದರೊಂದಿಗೆ ನದಿ ತಟಗಳ ಒತ್ತುವರಿ ತೆರವು ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. ಈ ಮೂಲಕ ಮುಂದಿನ ವರ್ಷಗಳಲ್ಲಿ ಉಂಟಾಗಲಿರುವ ಅನಾಹುತಗಳಿಗೆ ಕಡಿವಾಣ ಹಾಕುವ ಮೂಲಕ ನೆರೆ ಪರಿಸ್ಥಿತಿಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕಾಗಿದೆ.