ನಾಪೆÇೀಕ್ಲು, ಆ. 13: ಹಿಂದೂ ಧರ್ಮದಲ್ಲಿ ಗೋವಿಗೆ ಪೂಜನೀಯ ಸ್ಥಾನ. ದನಕರುಗಳನ್ನು ಗೋಮಾತೆ ಎಂದು ಪೂಜಿಸುವ ಪರಿಪಾಟ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಗೋವೊಂದು ತನ್ನನ್ನು ಪೂಜಿಸಿ, ಸಾಕಿ, ಸಲಹಿದ ಮಾಲೀಕರನ್ನು ರಕ್ಷಿಸಿ ತಾನು ದೈವಸ್ವರೂಪಿ ಎಂದು ಸಾಬೀತುಪಡಿಸಿದ ಘಟನೆ ನಾಪೆÇೀಕ್ಲುವಿನಲ್ಲಿ ನಡೆದಿದೆ.
ಗೋಮಾತೆಯ ಕಾರಣದಿಂದ ಬದುಕುಳಿದವರು ನಾಪೆÇೀಕ್ಲು ಗ್ರಾಮದ ನೂರಂಬಡ ಬ್ರಾಹ್ಮಣ ಕುಟುಂಬದ ಎನ್.ಎಸ್. ಉದಯಶಂಕರ್ ದಂಪತಿಗಳು.
ಕಳೆದ ಬಾರಿ ಮಡಿಕೇರಿ ಪಟ್ಟಣ ಸೇರಿದಂತೆ ಸೋಮವಾರಪೇಟೆ ತಾಲೂಕಿನ ಹಲವು ಭಾಗಗಳಲ್ಲಿ ಪ್ರಕೃತಿ ವಿಕೋಪ ಸಂಭವಿಸಿ ಪ್ರಾಣಹಾನಿ, ಆಸ್ತಿ-ಪಾಸ್ತಿ ಹಾನಿ ಸಂಭವಿಸಿದ್ದು, ಮರೆಯಲಾರದ ಘಟನೆ. ಆದರೆ ನಾಪೆÇೀಕ್ಲು, ವೀರಾಜಪೇಟೆ, ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಇಂತಹ ಘಟನೆಗಳು ನಡೆಯಲು ಸಾಧ್ಯವಿಲ್ಲ; ನಾವು ಸುಭದ್ರ ಎಂದುಕೊಳ್ಳುತ್ತಿದ್ದ ಜನಕ್ಕೆ ಈ ಬಾರಿ ಪ್ರಕೃತಿ ತನ್ನ ನೈಜ ರೂಪ ತೋರಿದೆ.
ಅದರಂತೆ ಉದಯಶಂಕರ್ ಮನೆ ಹಿಂಬಾಗದಲ್ಲಿ ಸುಮಾರು ಅರ್ಧ ಏಕರೆಯಷ್ಟು ಕಾಫಿ ತೋಟ ಜಾರಿ ಬಂದು ಮನೆಯ ಹಿಂಬದಿ ಗೋಡೆಗೆ ತಾಗಿ ನಿಂತಿದೆ. ಇದರ ರಭಸಕ್ಕೆ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ತಾ.9ರಂದು ಬೆಳಿಗ್ಗೆ 7.30 ಗಂಟೆಗೆ ಘಟನೆ ಸಂಭವಿಸಿದ್ದು, ಮನೆಯ ಹಿಂಬದಿಯಲ್ಲಿ ಪಾತ್ರೆ ತೊಳೆಯುತ್ತಿದ್ದ ಪತ್ನಿ ಹಾಗೂ ಉದಯಶಂಕರ್ ಹತ್ತು ನಿಮಿಷಕ್ಕೆ ಮುಂಚಿತವಾಗಿ ಹಾಲು ಕರೆಯಲು ಸಮೀಪದ ಕೊಟ್ಟಿಗೆಗೆ ತೆರಳಿದ್ದಾರೆ. ಕೇವಲ ಹತ್ತು ನಿಮಿಷದಲ್ಲಿ ಈ ಘಟನೆ ಸಂಭವಿಸಿದೆ. ಕೊಟ್ಟಿಗೆಯಿಂದ ಮರಳಿದ ಇವರಿಗೆ ಆಘಾತವಾಗಿದೆ. ನಾವು ಮನೆಯಲ್ಲಿದ್ದಿದ್ದರೆ? ಎಂಬ ಭಯ, ಭೀತಿ ಇವರನ್ನು ಕಂಗೆಡಿಸಿದೆ. ಇಂದಿಗೂ ಕುಸಿತದ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ರಾತ್ರಿ ಅಣ್ಣ ರವೀಂದ್ರ ಅವರ ಮನೆಯಲ್ಲಿ ತಂಗುತ್ತಿರುವದಾಗಿ ದಂಪತಿಗಳು `ಶಕ್ತಿ’ಗೆ ತಿಳಿಸಿದ್ದಾರೆ. ಸ್ಥಳಕ್ಕೆ ನಾಪೆÇೀಕ್ಲು ಕಂದಾಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
-ಪಿ.ವಿ.ಪ್ರಭಾಕರ್